ಬಳಂಜ: ತಾವು ಕಷ್ಡ ಪಟ್ಟ ಶಿಕ್ಷಣ ಮರೆಯಬಾರದು.ಇದರ ಹಿಂದೆ ತಂದೆ ತಾಯಿಯ ತ್ಯಾಗವಿದ್ದರೆ ಆಗಿನ ಕಾಲದ ಶಿಕ್ಷಕರ ಶ್ರಮವೂ ಇದೆ.ಆಧುನಿಕವಾಗಿ ಶಿಕ್ಷಣ ಪದ್ದತಿ ಬದಲಾದರೂ ಅನೇಕ ಶೋಷಿತ ಕುಟುಂಬ ಸರಕಾರಿ ಶಾಲೆಯನ್ನು ಅವಲಂಬಿಸಿದ್ದಾರೆ.ಅಂತಹ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು.ಇದಕ್ಕೆ ಊರವರ ಶ್ರಮ ಅಗತ್ಯ.ಊರ ಸರಕಾರಿ ಉಳಿಸುವ ಬೆಳೆಸುವ ಊರಿನವರ ಚಿಂತನೆ ಹೆಚ್ವಿದಾಗ ದಾನಿಗಳು ನೆರವು ನೀಡುವ ಸಂಕಲ್ಪ ಮಾಡುತ್ತಾರೆ ಎಂದು ಕೆನರಾ ಬ್ಯಾಂಕ್ ಅಧೀನಕ್ಕೊಳಪಟ್ಟ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಯ ಡಿ ಜಿ ಎಂ ಪ್ರಶಾಂತ್ ಜೋಶಿ ಹೇಳಿದರು.ಅವರು ಎ.15 ರಂದು ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಂಜ ಸರಕಾರಿ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆ ಬೆಳ್ತಂಗಡಿ, ರೋಟರಿ ಸಂಸ್ಥೆ ಇಂದಿರಾ ನಗರ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕೆನರಾ ಬ್ಯಾಂಕ್ ಅಧೀನಕ್ಕೊಳಪಟ್ಟ ಕ್ಯಾನ್ ಫಿನ್ ಹೋಮ್ ಸಂಸ್ಥೆಯು ಕೊಡುಗೆ ನೀಡಿದ ರೂ.12 ಲಕ್ಷ ವೆಚ್ಚದ ಸೋಲಾರ್ ವ್ಯವಸ್ಥೆ, ತರಗತಿ ಕೊಠಡಿ ನವೀಕರಣ, ಅಡಿಟೋರಿಯಂಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ.ಇದರ ಪ್ರಯೋಜನ ಸಿಗಲು ಇಲ್ಲಿನ ಗ್ರಾಮಸ್ಥರು, ಹಳೆವಿದ್ಯಾರ್ಥಿಗಳ ನೆರವು ಮುಖ್ಯವಾಗಿದೆ ಎಂದರು.ಬೆಳ್ತಂಗಡಿ ರೋಟರಿ ಕ್ಲಬ್ ನ ಅದ್ಯಕ್ಷೆ ಮನೋರಮಾ ಭಟ್ ಮಾತನಾಡಿ ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಈ ವರ್ಷದ ಯೋಜನೆ ಪರಿಸರ ಸಂರಕ್ಷಣೆ, ಶಿಕ್ಷಣ, ಅರೋಗ್ಯಕ್ಕೆ ಮಹತ್ವ ನೀಡುವುದಾಗಿದ್ದು, ಅದರಂತೆ ಬೆಳ್ತಂಗಡಿ ತಾಲೂಕಿಗೆ ಈ ವರ್ಷ ಕ್ಯಾನ್ ಪಿನ್ ಹೋಮ್ಸ್ ಲಿ ಸಹಯೋಗದೊಂದಿಗೆ ರೂ.69 ಲಕ್ಷ ನೆರವು ಬಂದಿದೆ.ಇದರಲ್ಲಿ ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಸೇರಿದ್ದು ಇಲ್ಲಿನ ಊರವರ, ಹಳೆ ವಿದ್ಯಾರ್ಥಿಗಳ ಚಿಂತನೆ ನಮ್ಮೂರ ಶಾಲೆ ಬೆಳೆಸಬೇಕು ಎಂದು ಇವರ ಬೇಡಿಕೆಯಂತೆ 12 ಲಕ್ಷ ರೂಗಳ ನೆರವು ನೀಡಿದ್ದೇವೆ.ಇದೇ ರೀತಿ ಕಾಳಜಿ ಇದ್ದರೆ ಇನ್ನಷ್ಟು ನೆರವು ನೀಡಲು ಶಕ್ತಿ ಬರುತ್ತದೆ ಎಂದರು. ಜನಜಾಗ್ರತಿ ವೇದಿಕೆಯ ಸ್ಥಾಪಕಾದ್ಯಕ್ಷ, ಬಳಂಜ ಗ್ರಾಮದ ಅಬಿವ್ರುದ್ದಿಗೆ ಕೊಡುಗೆ ನೀಡಿದ ಕೆ. ವಸಂತ ಸಾಲಿಯಾನ್ ಕಾಪಿನಡ್ಕ ಅದ್ಯಕ್ಷತೆ ವಹಿಸಿ ಮಾತನಾಡಿ ಒಂದು ಶಾಲೆಯ ಹಳೆವಿದ್ಯಾರ್ಥಿಗಳು ಎಷ್ಟೆ ದೊಡ್ಡ ಹುದ್ದೆ ಪಡೆದರು ಆ ಶಾಲೆಯನ್ನು ಮರೆಯಬಾರದು.ತನಗೆ ಬೆಳಕು ಕರುಣಿಸಿದೆ ಮುಂದು ಇಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಬೆಳಕು ಕರುಣಿಸಬೇಕು ಎಂಬ ಮನಸ್ಸಿನಿಂದ ಸಹಕರಿಸಲು ಮುಂದಾಗಬೇಕು.ರೋಟರಿ ಸಂಸ್ಥೆ ಇಲ್ಲಿಗೆ ನೀಡಿದ ಕೊಡುಗೆ ಮರೆಯಲು ಅಸಾಧ್ಯ.ಮುಂದೆ ಊರಿನ ಸಹಕಾರ ಇನ್ನಷ್ಷು ನೀಡಲು ಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಕೊಡುಗೆ ನೀಡಲು ಸಹಕರಿಸಿದ ರೋಟರಿ ಇಂದಿರಾನಗರದ ನಿಕಟ ಪೂರ್ವಾದ್ಯಕ್ಷ ಜಗದೀಶ್ ಮುಗುಳಿ, ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷೆ ಮನೋರಮಾ ಭಟ್, ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಯ ಡಿ ಜಿ ಎಮ್ ಪ್ರಶಾಂತ್ ಜೋಶಿ, ಶಾಲಾ ಹಳೆವಿದ್ಯಾರ್ಥಿ ಪತ್ರಕರ್ತ ಮನೋಹರ್ ಬಳಂಜ ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ಎಮ್.ವಿ.ಭಟ್, ಬೆಳ್ತಂಗಡಿ ರೋಟರಿ ಪೂರ್ವಾದ್ಯಕ್ಷ ನ್ಯಾಯವಾದಿ ಧನಂಜಯ ರಾವ್, ನಿಯೋಜಿತ ಅದ್ಯಕ್ಷ ಮಚ್ವಿಮಲೆ ಅನಂತ್ ಭಟ್, ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ರಕ್ಷಾ ರಾಗ್ನೇಶ್, ಶಾಲಾ ಹಳೆವಿದ್ಯಾರ್ಥಿ ಕಿರುತೆರೆ ನಿರ್ದೇಶಕ ವಿನು ಬಳಂಜ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ನ್ಯಾಯವಾದಿ ಸತೀಶ್ ರೈ ಬಾದಡ್ಕ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅದ್ಯಕ್ಷರುಗಳಾದ ಪ್ರಮೋದ್ ಕುಮಾರ್ ಜೈನ್, ಅನಂತರಾಜ್ ಜೈನ್, ಉಪಸ್ಥಿತರಿದ್ದರು.ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿಲ್ಫ್ರೆಡ್ ಡಿಸೋಜ ನಿರೂಪಿಸಿ, ಶಿಕ್ಷಕ ಮಲ್ಲಿಕಾರ್ಜುನ ವಂದಿಸಿದರು.
ಹಳೆ ವಿದ್ಯಾರ್ಥಿ ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿದ್ಯಾಭಿಮಾನಿಗಳು ಶಾಲೆಗೆ ಕೊಡುಗೆ ನೀಡಿದ 400 ಚಯರ್ ಗಳನ್ನು ಹಸ್ತಾಂತರಿಸಲಾಯಿತು.