ಬೆಳ್ತಂಗಡಿ: ದಾಖಲೆ ಇಲ್ಲದೆ ೧೦ ಲಕ್ಷ ರೂ. ಸಾಗಾಟ ಮಾಡುತ್ತಿದ್ದ ಎಟಿಎಂ ವಾಹನವನ್ನು ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.೧೦ ರಂದು ರಾತ್ರಿ ೧೦ ಗಂಟೆಗೆ ವಶಕ್ಕೆ ಪಡೆದಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ KA-53C 2542 ವಾಹನದಲ್ಲಿ ಸಮರ್ಪಕ ದಾಖಲೆಗಳಿಲ್ಲದೆ ಅವಧಿ ಮೀರಿ ೧೦ ಲಕ್ಷ ರೂ. ಮೊತ್ತವನ್ನು ರಾತ್ರಿ ೧೦ ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ತಕ್ಷಣವೇ ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರಗಳ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ ೧ ಲಕ್ಷ ರೂ. ಮೊತ್ತವನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿತ್ತು. ಬಳಿಕ ಸೂಕ್ತ ದಾಖಲೆ ಒದಗಿಸಿದ್ದರಿಂದ ಹಿಂದಿರುಗಿಸಲಾಗಿತ್ತು.
ಇದೀಗ ಮೊದಲ ಬಾರಿಗೆ ದೊಡ್ಡ ಮೊತ್ತವೊಂದನ್ನು ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿದೆ.