Site icon Suddi Belthangady

ಬೆಳಾಲು ಪ್ರೌಢ ಶಾಲೆಯಲ್ಲಿ ಸಾಹಿತ್ಯ ಪ್ರೇರಣೆ ಶಿಬಿರ

ಬೆಳಾಲು: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಶಾಲಾ ಮಕ್ಕಳಿಗೆ ಸಾಹಿತ್ಯ ಪ್ರೇರಣಾ ಕಾರ್ಯಕ್ರಮ ಜರಗಿತು. ಶಾಲೆಯ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದವರು ಸಹಭಾಗಿತ್ವವನ್ನು ನೀಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪತ್ರಕರ್ತ ಅಶ್ರಫ್ ಆಲಿ ಕುಂಞಿ ಮುಂಡಾಜೆಯವರು ಮಾತನಾಡುತ್ತಾ, ಬರವಣಿಗೆ ಒಂದು ಕಲೆ. ಕಲೆಯನ್ನು ವ್ಯವಸಾಯವಾಗಿಯೂ ಹವ್ಯಾಸವಾಗಿಯೂ ಬೆಳೆಸಿಕೊಳ್ಳಲು ಅವಕಾಶವಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಕಥೆ ಕವನ ಮುಂತಾದ ಬರೆಯುವ ಅಭಿರುಚಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ವಿದ್ಯಾರ್ಥಿಗಳನ್ನು ಬದುಕಿಗೆ ಸಿದ್ಧಗೊಳಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಕಥೆ ಕವನ ಬರವಣಿಗೆಯ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಿದರು.
ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ವಹಿಸಿದ್ದರು. ವೇದಿಕೆಯಲ್ಲಿ ಶಿಬಿರದ ಸಂಯೋಜಕ ಕೃಷ್ಣಾನಂದರವರು ಮತ್ತು ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಜೀವನ್ ಕುಮಾರ್ ಶಿಬಿರದ ವರದಿ ಮಂಡನೆ ಮಾಡಿದರೆ ಕು. ಲಿಖಿತರವರು ದಿನದ ಚಿಂತನೆಯನ್ನು ನಡೆಸಿದರು. ಶ್ರವಣ್ ಕುಮಾರ್ ಸ್ವಾಗತಿಸಿ, ವಿನ್ಯಾಸ್ ಧನ್ಯವಾದ ಸಲ್ಲಿಸಿದರು. ಚಿಂತನ್ ಕಾರ್ಯಕ್ರಮ ನಿರೂಪಿಸಿದರು.

Exit mobile version