Site icon Suddi Belthangady

ಬೆಳ್ತಂಗಡಿ ವಿಧಾಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಹೇಗಾಗುತ್ತಿದೆ-ಎಷ್ಟು ದೂರು ಬಂದಿದೆ- ಮತದಾರರು ಎಷ್ಟು- ಚುನಾವಣಾಧಿಕಾರಿಗಳ ಸುದ್ದಿಗೋಷ್ಠಿ

ಬೆಳ್ತಂಗಡಿ- ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ಬೆಳ್ತಂಗಡಿಯಲ್ಲಿಯೂ ಕೂಡ ಮತದಾರರ ಕುತೂಹಲ, ಅಭ್ಯರ್ಥಿಗಳ ಲೆಕ್ಕಾಚಾರ ಎಲ್ಲವೂ ಕೂಡ ತೀವ್ರಗತಿಯಲ್ಲಿ ನಡೆಯುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,144 ಮತದಾರರಿದ್ದು, ಇನ್ನೂ ಕೂಡ ಸೇರ್ಪಡೆಯಾಗಲಿದ್ದಾರೆ ಎಂದು ಚುನಾವಣಾಧಿಕಾರಿ ಯೋಗೇಶ್ ಹೆಚ್ಆರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1694 ಮಂದಿ ವಿ ಐ ಪಿ ಮತದಾರರು
80+ ಮತದಾರರು ಒಟ್ಟು 4358
ಯಾರ್ಯಾರಿಗೆ ಅಂಚೆ ಮತದಾನದ ಅವಕಾಶ
ಬೆಳ್ತಂಗಡಿಯಲ್ಲಿ 110634 ಪುರುಷ ಮತದಾರರು, 111510 ಮಹಿಳಾ ಮತದಾರರು ಕ್ಷೇತ್ರದಲ್ಲಿದ್ದಾರೆ. ಇವರಲ್ಲಿ 80+ ವಯಸ್ಸಾದ ಮತದಾರರ ಸಂಖ್ಯೆ 4358 ಆಗಿದೆ. ಇವರಿಗೆ ಅಂಚೆ ಮತದಾನ ಮಾಡಲು ಅವಕಾಶವಿದೆ. ಜೊತೆಗೆ ವಿಕಲಚೇತನರು, ರೋಗ ಭಾದಿತರು, ಅಸೌಖ್ಯದಿಂದ ಹಾಸಿಗೆ ಹಿಡಿದವರು, ಕೋವಿಡ್ ಭಾದಿತರು ಮುಂತಾದವರಿಗೆ ಸೂಕ್ತ ದಾಖಲೆಗಳಿದ್ದರೆ ಅಂಚೆ ಮತದಾನಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಮುಖಂಡರುಗಳಿಗೂ ಮಾಹಿತಿ:
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸ್ಥಳೀಯ ರಾಜಕೀಯ ಮುಖಂಡರಿಗೂ ಚುನಾವಣೆಯ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೆ ರಾಜಕೀಯದ ಮುಖಂಡರುಗಳ ಪೈಕಿ ಕೇವಲ ಆರರಿಂದ ಏಳು ಜನ ಭಾಗಿಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದರು.
ಹದ್ದಿನ ಕಣ್ಣಿಟ್ಟಿದೆ ಎಫ್ ಎಸ್ ಟಿ ತಂಡ:
ಫ್ಲೈಯಿಂಗ್ ಸ್ಪಾಟ್ ಟೀಮ್ ಕ್ಷೇತ್ರದಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಅನುಮತಿ ಪಡೆದು ಕಾರ್ಯಕ್ರಮ ನಡೆಯುತ್ತಿದ್ದರೂ ಅಲ್ಲೇನಾದ್ರೂ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ಯಾ ಅನ್ನುವುದನ್ನು ಎಫ್ ಎಸ್ ಟಿ ತಂಡ ಗಮನಿಸುತ್ತದೆ.
ಈಗಾಗ್ಲೇ ಎರಡು ದೂರುಗಳು ಬಂದಿವೆ:
ಚುನಾವಣಾಧಿಕಾರಿಗಳಿಗೆ ಈಗಾಗ್ಲೇ ಎರಡು ದೂರುಗಳು ಬಂದಿದ್ದು, ಈ ಬಗ್ಗೆ ಕಾರ್ಯಕ್ರಮದ ಆಯೋಜಕರಿಗೆ ವಿವರಣೆ ಕೇಳಿದ್ದೇವೆ. ವಿವರಣೆ ನೋಡಿದ ನಂತರ ಮುಂದಿನ ಪ್ರಕ್ರಿಯೆ ನಡೆಯುತ್ತದೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಅಭ್ಯರ್ಥಿ 40 ಲಕ್ಷ ಖರ್ಚು ಮಾಡಲು ಅವಕಾಶ
ಅದಕ್ಕಿಂತ ಹೆಚ್ಚು ಮಾಡಿದ್ರೆ ಗೆದ್ದರೂ ಅನರ್ಹ
:
ಒಬ್ಬ ಅಭ್ಯರ್ಥಿ 40 ಲಕ್ಷ ರೂಪಾಯಿಯಷ್ಟು ಹಣ ಚುನಾವಣೆಗೆ ಖರ್ಚು ಮಾಡಬಹುದು. ಅದನ್ನು ಚುನಾವಣಾಧಿಕಾರಿಗಳ ತಂಡವೂ ಗಮನಿಸುತ್ತಾ ಇರುತ್ತದೆ. ಅವರು ಕೊಡುವ ದಾಖಲೆ ಜೊತೆ ನಾವೂ ಕೂಡ ದಾಖಲೆಗಳನ್ನು ಕ್ರೋಡಿಕರಿಸುತ್ತಿರುತ್ತೇವೆ. ಅದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇ ಆದಲ್ಲಿ ಗೆದ್ದರೂ ಆತ ಶಾಸಕ ಸ್ಥಾನದಿಂದ ಅನರ್ಹನಾಗುತ್ತಾನೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ವಾಹನ, ಆಂಬ್ಯುಲೆನ್ಸ್ ಕೂಡ ಚೆಕ್ ಮಾಡಬಹುದು:
ಚೆಕ್ ಪೋಸ್ಟ್ ಗಳಲ್ಲಿ ಸರ್ಕಾರಿ ವಾಹನಗಳು, ಆಂಬ್ಯುಲೆನ್ಸ್ ಗಳನ್ನೂ ಕೂಡ ಚೆಕ್ ಮಾಡಬಹುದು. ಯಾಕಂದ್ರೆ ಬೇರೆ ರಾಜ್ಯಗಳಲ್ಲಿ ಇಂತಹ ವಾಹನಗಳಲ್ಲಿ ದುಡ್ಡು ಸಾಗಾಟ ನಡೆಸಿರುವ ಪ್ರಕರಣಗಳು ನಡೆದಿವೆ. ಆದ್ದರಿಂದ ಇಂತಹ ವಾಹನಗಳ ತಪಾಸಣೆಗೆ ಅವಕಾಶ ನೀಡಲಾಗಿದೆ ಎಂದು ಯೋಗೇಶ್ ಹೆಚ್ ಆರ್ ತಿಳಿಸಿದ್ದಾರೆ.
ವಿವಿಧ ರೀತಿಯ 17 ಮತಗಟ್ಟೆಗಳು:
ಬ್ಲೂವೇರ್,ಎತ್ನಿಕ್,ಗೋ ಗ್ರೀನ್,ಹೆರಿಟೇಜ್ ಮತಗಟ್ಟೆ
ಕಂಬಳ.ಯಕ್ಷಗಾನದ ಸೊಬಗು ಸಾರಲು ಪ್ರತ್ಯೇಕ ಮತಗಟ್ಟೆ
ಸಖಿ, ವಿಕಲಚೇತನರು, ಯುವ ಮತದಾರರ ಸೆಳೆಯಲು ಮತಗಟ್ಟೆ
ವಿವಿಧ ರೀತಿಯ 17 ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳಲ್ಲಿ ಬ್ಲೂವೇರ್ ಅಂದ್ರೆ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಸಾಂಪ್ರದಾಯಿಕ ಶ್ರೀಮಂತತೆಯನ್ನು ಸಾರಲು ಎತ್ನಿಕ್, ಹಸಿರೇ ಉಸಿರು ಅಂತ ಸಾರುವ ಗೋ ಗ್ರೀನ್, ಹೆರಿಟೇಜ್ ಪರಿಚಯಿಸುವ ಮತಗಟ್ಟೆ, ಕಂಬಳಕ್ಕೊಂದು ಮತಗಟ್ಟೆ, ಯಕ್ಷಗಾನಕ್ಕೊಂದು ಮತಗಟ್ಟೆಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಮಹಿಳಾ ಮತಗಟ್ಟೆಗಳನ್ನಾಗಿ 5 ಮತಗಟ್ಟೆಗಳಿಗೆ ಸಖಿಯೆಂಬ ಹೆಸರಿನಿಂದ ಅಲಂಕರಿಸಲಾಗುತ್ತದೆ. ವಿಕಲಚೇತನರಿಗೆ ಪ್ರೋತ್ಸಾಹಿಸಲು, ಯುವ ಮತದಾರರ ಸೆಳೆಯಲು ಪ್ರತ್ಯೇಕ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ತಹಶೀಲ್ದಾರ್ ಸುರೇಶ್ ಕುಮಾರ್ ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್ ಬಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಟರಾಜ್ , ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಉಪಸ್ಥಿತರಿದ್ದರು.

Exit mobile version