Site icon Suddi Belthangady

ಎಸ್ ಡಿ ಎಂ ಕಾಲೇಜು ಉಜಿರೆಯ ಪ್ರಾಂಶುಪಾಲರಾದ ಡಾ.ಎ.ಜಯಕುಮಾರ ಶೆಟ್ಟಿಯವರು ನಿವೃತ್ತಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಕಳೆದ 38 ವರ್ಷಗಳಿಂದ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎ. ಜಯ ಕುಮಾರ ಶೆಟ್ಟಿ ಅವರು ಮಾ.31 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಕಾಲೇಜಿನ ಪ್ರಾಚಾರ್ಯರಾಗಿ ಇತ್ತೀಚೆಗೆ ಪದೋನ್ನತಿ ಹೊಂದಿದ ನಂತರ ಇವರ ನೇತೃತ್ವದಲ್ಲಿ ಇತ್ತೀಚೆಗೆ ಶ್ರೀ.ಧ.ಮಂ.ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನಾ ಕೇಂದ್ರದಿಂದ ಅತ್ಯುನ್ನತ A++ ಗ್ರೇಡ್ ದೊರಕಿತ್ತು.

ಮಂಗಳೂರು ತಾಲೂಕಿನ ಅರ್ಕುಳ ಬೀಡು ಮನೆತನದವಾರಾದ ಡಾ.ಎ.ಜಯ ಕುಮಾರ ಶೆಟ್ಟಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಅರ್ಕುಳ ಶ್ರೀ ರಾಮ ಶಾಲೆ, ಪದವಿ ಶಿಕ್ಷಣವನ್ನು ಮಂಗಳೂರು ವಿವಿ ಕಾಲೇಜಿನಲ್ಲಿ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ರಾಂಕಿನೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರುತ್ತಾರೆ. 1985 ರಲ್ಲಿ ಮಂಗಳೂರಿನ ಶ್ರೀ ಧ.ಮಂ.ಆಡಳಿತ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ ಮುಂದಕ್ಕೆ ಉಜಿರೆಯ ಶ್ರೀ.ಧ.ಮಂ.ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ, ಉಪ ಪ್ರಾಚಾರ್ಯರಾಗಿ ನಂತರ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಕೈಗಾರಿಕಾ ಪ್ರೋತ್ಸಾಹಕಗಳ ಮೇಲಿನ ಸಂಶೋಧನಾ ಪ್ರಭಂದಕ್ಕೆ ಪಿ ಹೆಚ್ ಡಿ ಪದವಿ, ಭಾರತೀಯ ವಿದ್ಯಾಭವನದಿಂದ ಸಿಬ್ಬಂದಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅದ್ಯಯನ ಹಾಗೂ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಅಧಿಕೃತ ಸಂಶೋಧನಾ ಮಾರ್ಗದರ್ಶಕರಾಗಿರುವ ಇವರ ಮಾರ್ಗದರ್ಶನದಲ್ಲಿ 8 ಸಂಶೋಧನಾರ್ಥಿಗಳು ಪಿಹೆಚ್ ಡಿ ಪದವಿಯನ್ನು ಪಡೆದಿದ್ದು ಪ್ರಸ್ತುತ 4 ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದಾರೆ.
ಯುಜಿಸಿ ಪ್ರಾಯೋಜಿತ ಮೂರು ಸಂಶೋಧನಾ ಪ್ರಾಜೆಕ್ಟ್ ಗಳನ್ನು ಪೂರೈಸಿರುವ ಇವರ 50 ಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ 50 ಕ್ಕೂ ಮಿಕ್ಕಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಮ್ಮಟಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಆರ್ಥಿಕ ಅಭಿವೃದ್ದಿ, ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ದಿ, ಒಳಗೊಳ್ಳುವ ಅಭಿವೃದ್ದಿ, ಅಂತರಾಷ್ಟ್ರೀಯ ವ್ಯಾಪಾರ ಹಾಗೂ ಸಿರಿ ಮೊದಲಾದ 10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣಾಭಿವೃದ್ದಿ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ಅತ್ಯುತ್ತಮ ಯೋಜನಾಧಿಕಾರಿಯಾಗಿ ರಾಜ್ಯಪ್ರಶಸ್ತಿಯನ್ನು ಪಡೆದಿರುತ್ತಾರೆ. ರೋಟರಿ ಕ್ಲಬ್ ನಲ್ಲಿ ಅಧ್ಯಕ್ಷರಾಗಿ ಅತ್ಯುತ್ತಮ ಸಮಾಜ ಸೇವೆಗಾಗಿ ಜಿಲ್ಲಾ ಅತ್ಯುತ್ತಮ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.
ಸಮಕಾಲೀನ ಆರ್ಥಿಕ ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗುತ್ತಿವೆ.

Exit mobile version