Site icon Suddi Belthangady

ಪಜಿರಡ್ಕ ಸಂಗಮ ಕ್ಷೇತ್ರದಲ್ಲಿ ದೃಢ ಕಲಶಾಭಿಷೇಕ, ಲೆಕ್ಕ ಪತ್ರ ಮಂಡನೆ

ಕಲ್ಮಂಜ :ಸಂಗಮ ಕ್ಷೇತ್ರ ಕಲ್ಮಂಜ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜ.31 ರಿಂದ ಫೆ.6ರ ತನಕ ಜರಗಿದ್ದು ಇದರ ಲೆಕ್ಕಪತ್ರ ಮಂಡನೆ ಹಾಗೂ ದೇವಸ್ಥಾನದಲ್ಲಿ ದೃಢ ಕಲಶಾಭಿಷೇಕ ಕಾರ್ಯಕ್ರಮ ಮಾ.24 ರಂದು ಜರಗಿತು.
ಲೆಕ್ಕಪತ್ರ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಅಧ್ಯಕ್ಷ ತುಕಾರಾಮ ಸಾಲಿಯನ್ ಆರ್ಲ ಮಾತನಾಡಿ “ಊರ ಹಾಗೂ ಪರ ಊರ ಭಕ್ತರ ಸಹಕಾರದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅಭೂತಪೂರ್ವವಾಗಿ ಜರಗಿದೆ. ಒಟ್ಟು ರೂ. 28 ಲಕ್ಷಕ್ಕಿಂತ ಅಧಿಕ ಮೊತ್ತ ಉಳಿಕೆಯಾಗಿದ್ದು, ಯಾತ್ರಿ ನಿವಾಸ ನಿರ್ಮಾಣಕ್ಕೆ, ದೇವಸ್ಥಾನಕ್ಕೆ ಅಗತ್ಯವಿರುವ ಕುರ್ಚಿ, ಟೇಬಲ್,ಜನರೇಟರ್ ಖರೀದಿ ಹಾಗೂ ಗ್ರಾಮದ ಉಳ್ಳಾಯ-ಉಳ್ಳಾಲ್ತಿ ಗುಂಡ ದೈವಸ್ಥಾನಕ್ಕೆ ದೇಣಿಗೆ ನೀಡಲು ವಿನಿಯೋಗಿಸುವ ಕುರಿತು ವ್ಯವಸ್ಥಾಪನ ಸಮಿತಿಯೊಂದಿಗೆ ಮಾತುಕತೆ ನಡೆಸಲಾಗಿದೆ” ಎಂದು ಹೇಳಿದರು.


“ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಸೇವೆ ನಡೆಯುತ್ತಿದ್ದು ಇದಕ್ಕೆ ಭಕ್ತಾದಿಗಳು ರೂ.3 ಸಾವಿರ ದೇಣಿಗೆ ನೀಡಿ ಸಹಕರಿಸಬಹುದು”ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಹೇಳಿದರು.
ಉಪಾಧ್ಯಕ್ಷ ಶಶಿಕಿರಣ್ ಜೈನ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಪಾಂಡುರಂಗ ಕಾಕತ್ಕರ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಮಂಜುನಾಥ ಶೆಟ್ಟಿ ವಂದಿಸಿದರು.

ದೃಢಕಲಶಾಭಿಷೇಕ
ದೇವಸ್ಥಾನದಲ್ಲಿ ನೀಲೇಶ್ವರ ಆಲಂಬಾಡಿ ವೇದಮೂರ್ತಿ ಪದ್ಮನಾಭ ತಂತ್ರಿಗಳ ವೈದಿಕ ನೇತೃತ್ವದಲ್ಲಿ ದೃಢಕಲಶಾಭಿಷೇಕ, ವಿಶೇಷ ಪೂಜೆ,ಅನ್ನ ಸಂತರ್ಪಣೆ ಮತ್ತಿತರ ಕಾರ್ಯಕ್ರಮಗಳು ಸ್ಥಳೀಯ ಋತ್ವಿಜರ ಹಾಗೂ ಭಕ್ತರ ಸಹಕಾರದಲ್ಲಿ ಜರಗಿದವು.

Exit mobile version