ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಕಾಪು ಬಳಿ ಮಾ.24 ರಂದು ಸಂಜೆ ರಸ್ತೆ ಬದಿ ಬೆಂಕಿ ಬಿದ್ದ ಘಟನೆ ನಡೆದಿದೆ.
ಇಲ್ಲಿ ಹೈ ಟೆನ್ಶನ್ ವಿದ್ಯುತ್ ಲೈನ್ ಹಾದು ಹೋಗಿದ್ದು ಇದರಿಂದ ಸಿಡಿದ ಕಿಡಿಗಳು ಬುಡ ಭಾಗದಲ್ಲಿರುವ ಒಣಹುಲ್ಲು ಹಾಗೂ ಗಿಡಗಂಟಿಗಳಿಗೆ ಹರಡಿ ಬೆಂಕಿ ಉಂಟಾಯಿತು.
ಅಗ್ನಿಶಾಮಕ ದಳ, ಸ್ಥಳೀಯರಾದ ಸಚಿನ್ ಭಿಡೆ, ಸುಬ್ರಾಯ ಫಡಕೆ, ವೆಂಕಟೇಶ್ವರ ಭಟ್ ,ವಿಶ್ವನಾಥ ಬೆಂಡೆ, ಈಶ್ವರ ಗೌಡ, ಗ್ರಾಪಂ ಸದಸ್ಯರಾದ ಗಣೇಶ ಬಂಗೇರ, ಜಗದೀಶ್ ನಾಯ್ಕ್ ಮತ್ತಿತರರು ಸೇರಿ ಬೆಂಕಿಯನ್ನು ಹತೋಟಿಗೆ ತಂದರು.
ಬೆಂಕಿ ಬಿದ್ದ ಒಂದು ಭಾಗದಲ್ಲಿ ನದಿ ಹಾಗೂ ಇನ್ನೊಂದು ಭಾಗದಲ್ಲಿ ರಸ್ತೆ ಇದೆ. ಬೆಂಕಿ ಇನ್ನಷ್ಟು ಮುಂದುವರೆಯುತ್ತಿದ್ದರೆ ಸ್ಥಳೀಯ ತೋಟವನ್ನು ಪ್ರವೇಶಿಸುವ ಸಾಧ್ಯತೆ ಇತ್ತು.
ಈ ಪ್ರದೇಶದಲ್ಲಿ ಸತತ ಮೂರು ವರ್ಷಗಳಿಂದ ಬೆಂಕಿ ಪ್ರಕರಣ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ತನ್ನ ಲೈನ್ ಭಾಗದಲ್ಲಿರುವ ಒಣ ಹುಲ್ಲು, ಗಿಡಗಂಟಿ ತೆರವುಗೊಳಿಸದಿರುವುದು ಬೆಂಕಿ ಅನಾಹುತ ಉಂಟಾಗಲು ಕಾರಣವೆಂದು ಸ್ಥಳೀಯರು ದೂರಿದ್ದಾರೆ.