Site icon Suddi Belthangady

ಉಜಿರೆ: ಟ್ಯಾಲೆಂಟ್ಸ್ ಡೇ ಸಿನಿಮಾ ಬಿಡುಗಡೆ-ಎಸ್ ಡಿ ಎಂ ವಿದ್ಯಾರ್ಥಿಗಳ ಚಿತ್ರ ಬಿಡುಗಡೆಗೊಳಿಸಿದ ಸುದ್ದಿ ಸಿ ಇ ಒ ಸಿಂಚನಾ ಊರುಬೈಲು

ಉಜಿರೆ: ಎಸ್ ಡಿ ಎಂ ಕಾಲೇಜು ಉಜಿರೆಯ ಬಿವೋಕ್ ವಿದ್ಯಾರ್ಥಿಗಳು ನಿರ್ಮಿಸಿರುವ ಕಿರುಚಿತ್ರ ಟ್ಯಾಲೆಂಟ್ಸ್ ಡೇ ಬಿಡುಗಡೆಗೊಂಡಿದೆ. ಮಾ. 24 ರಂದು ಎಸ್ ಡಿ ಎಂ ಕಾಲೇಜು ಉಜಿರೆಯ ಸೆಮಿನಾರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಬೆಳ್ತಂಗಡಿಯ ಸಿಇಒ ಸಿಂಚನಾ ಊರುಬೈಲು ಚಿತ್ರ ಬಿಡುಗಡೆಗೊಳಿಸಿದರು.


ಆಂಟೋನಿ ನಿರ್ದೇಶಿಸಿರುವ ಚಿತ್ರದಲ್ಲಿ ಎಸ್ ಡಿ ಎಂ ಕಾಲೇಜಿನ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಟಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ನಟಿಸಿರುವ ವಿದ್ಯಾರ್ಥಿಗಳ ನಟನೆಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆಯನ್ನು ನೀಡುತ್ತಿದ್ದಾರೆ.


ಚಿತ್ರ ಬಿಡುಗಡೆ ಕಾರ್ಯಕ್ರಮದ ವೇಳೆ ಸುದ್ದಿ ಸಿ ಇ ಒ ಸಿಂಚನಾ ಊರುಬೈಲು ಮಾತನಾಡಿ “ವಿದ್ಯಾರ್ಥಿಗಳಲ್ಲಿರುವ ಸಿನಿಮಾದ ಆಸಕ್ತಿ ಮತ್ತು ನಿರ್ದೇಶಕ ಆಂಟೋನಿಯವರಿಗೆ ಇರುವ ಸಿನಿಮಾ ಜ್ಞಾನ ಮೆಚ್ಚುವಂತಿದೆ. ಚಿತ್ರ ತಂಡದ ನಟ ನಟಿಯರು ವೃತ್ತಿಪರವಾಗಿ ನಟಿಸಿದ್ದಾರೆ. ಟ್ಯಾಲೆಂಟ್ಸ್ ಡೇ ಸಿನಿಮಾ ನನಗೆ ವಿದ್ಯಾರ್ಥಿ ಜೀವನವನ್ನು ಕಟ್ಟಿಕೊಡುವಂತಿದೆ. ಈ ಚಿತ್ರದ ನಿರ್ದೇಶಕರು, ನಟ ನಟಿಯರು ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಅಭೂತಪೂರ್ವ ಯಶಸ್ಸು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.


ಈ ವೇಳೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರರವರು ಮಾತನಾಡಿ ನನಗೆ ಸಿನಿಮಾ ಅಂದ್ರೆ ಬಲು ಪ್ರೀತಿ. ಮಕ್ಕಳು ಮಾಡಿರುವ ಈ ಸಿನಿಮಾಗೆ ಬರುತ್ತಿರುವ ಮೆಚ್ಚುಗೆಯನ್ನು ನೋಡಿದಾಗ ಖುಷಿಯಾಗುತ್ತದೆ. ಅಲ್ಲದೇ ನಮ್ಮ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಕಾಲೇಜಿಗೆ ಇದೊಂದು ಹೆಮ್ಮೆಯೆಂದು ತಿಳಿಸಿದರು. ಇದೇ ವೇಳೆ ಸುದ್ದಿಯೊಂದಿಗೆ ಭಾಂದವ್ಯವನ್ನು ಮೆಲುಕು ಹಾಕಿದ್ರು.


ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಯಕುಮಾರ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಸಿನಿಮಾ ನೋಡಿ ಖುಷಿಯಾಗಿದ್ದಾನೆ. ಕ್ಯಾಮರಾ ಮುಂದೆ ನಿಲ್ಲುವುದೇ ಕಷ್ಟಕರ, ಅವರು ತುಂಬಾನೇ ನ್ಯಾಚುರಲ್ ಆಗಿ ನಟಿಸಿದ್ದಾರೆ. ಈ ಸಿನಿಮಾ ಎಸ್ ಡಿ ಎಂ ಕಾಲೇಜಿಗೆ ಹೆಮ್ಮೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುವೀರ್ ಜೈನ್, ಮಾಧವ ಹೊಳ್ಳ, ಕುಮಾರ್ ಹೆಗ್ಡೆ, ಸ್ಮಿತೇಶ್ ಬಾರ್ಯ, ದಾಮೋದರ್ ದೊಂಡೋಲೆ, ಉಪಸ್ಥಿತರಿದ್ದರು.

Exit mobile version