ನೆರಿಯ: ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಶೀಘ್ರ ರೋಗ ಪತ್ತೆ ಹಚ್ಚಿ, ಅದಕ್ಕೆ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾದಾಗ ಶಿಬಿರ ಆಯೋಜಕರ ಕಾರ್ಯ ಸಾರ್ಥಕವಾಗುತ್ತದೆ ಎಂದು ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ಅಭಿಪ್ರಾಯಪಟ್ಟರು.
ಅವರು ಮಾ 19 ರಂದು ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಹಾಗೂ ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇವುಗಳ ನೇತೃತ್ವದಲ್ಲಿ ಗಂಡಿಬಾಗಿಲು ಸಂತ ತೋಮಸ್ ಚರ್ಚ್ ವಠಾರದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಹಾಗೂ ಸಮುದಾಯ ದಂತ ವಿಭಾಗ ಯೆನಪೋಯ ದಂತ ಕಾಲೇಜು & ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ತಜ್ಞ ವೈದ್ಯರ ತಂಡದಿಂದ ಉಚಿತ ದಂತ ತಪಾಸಣೆ, ಚಿಕಿತ್ಸೆ ಹಾಗೂ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅತ್ತಾವರ ಕೆ.ಎಮ್.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉದಯ್ ಶಿಬಿರಕ್ಕೆ ಶುಭ ಹಾರೈಸಿದರು. ದೇರಳಕಟ್ಟೆ ಯೆನಪೋಯ ದಂತ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರಕೃತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಂಡಿಬಾಗಿಲು ಸಂತ ತೋಮಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ರವರು ಶಿಬಿರದ ಅಧ್ಯಕ್ಷೀಯ ನೆಲೆಯಿಂದ ಮಾತನಾಡಿದರು.
ಈ ಶಿಬಿರದಲ್ಲಿ ದಂತ ತಪಾಸಣೆ & ಚಿಕಿತ್ಸೆ, ಕಣ್ಣಿನ ತಪಾಸಣೆ, ಮಧುಮೇಹ & ಸಕ್ಕರೆ ಖಾಯಿಲೆ ತಪಾಸಣೆ, ಕಿವಿ/ಮೂಗು/ಗಂಟಲು ವಿಭಾಗ, ಎಲುಬು ರೋಗ, ಮಕ್ಕಳ ವಿಭಾಗ, ಸ್ತ್ರೀ ರೋಗ ವಿಭಾಗ, ಕ್ಯಾನ್ಸರ್ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಮುಂತಾದ ಸೇವೆಗಳು ಜನರಿಗೆ ಲಭ್ಯವಾದವು. ಬೆಳ್ತಂಗಡಿ ಸ್ಪಂದನ ಲ್ಯಾಬೋರೇಟರಿ & ಪಾಲಿಕ್ಲಿನಿಕ್ ವತಿಯಿಂದ ರೂ. 800/- ಕ್ಕೆ ಸಂಪೂರ್ಣ ದೇಹದ ತಪಾಸಣೆ ನಡೆಸಲಾಯಿತು. ಗಂಡಿಬಾಗಿಲು ಚರ್ಚಿನ ಸಂಡೇ ಸ್ಕೂಲ್ ಮುಖ್ಯೋಪಾಧ್ಯಾಯ. ಶಿಜು ಚೇಟುತಡತ್ತಿಲ್ ಕಾರ್ಯಕ್ರಮ ನಿರೂಪಿಸಿದರು.
ಕಾರಿತಾಸ್ ಇಂಡಿಯಾ ನವದೆಹಲಿ, ಸ್ನೇಹ ಜ್ಯೋತಿ ಮಾಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ, ಸೈಂಟ್ ತೋಮಸ್ ಕ್ರೆಡಿಟ್ ಯೂನಿಯನ್, ಸೈಂಟ್ ವಿನ್ಸೆಂಟ್ ಡಿ’ ಪೌಲ್ ಸೊಸೈಟಿ ಗಂಡಿಬಾಗಿಲು, ಮಾತೃವೇದಿ ಘಟಕ ಗಂಡಿಬಾಗಿಲು, ಸಂಡೇ ಸ್ಕೂಲ್ ಗಂಡಿಬಾಗಿಲು, ಕೆ.ಎಸ್.ಎಮ್.ಸಿ.ಎ ಗಂಡಿಬಾಗಿಲು, ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಗಂಡಿಬಾಗಿಲು ಹಾಗೂ ಉದಯ ಮಹಾಸಂಘ ಗಂಡಿಬಾಗಿಲು ಇವುಗಳ ಸಹಭಾಗಿತ್ವದಲ್ಲಿ ಈ ಶಿಬಿರವು ನಡೆಯಿತು. ಎಲ್ಲಾ ಸಹಭಾಗಿ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 150 ಕ್ಕೂ ಹೆಚ್ಚಿನ ಜನರು ಈ ಶಿಬಿರದ ಪ್ರಯೋಜನ ಪಡೆದರು.