Site icon Suddi Belthangady

‘ಮುಂದಿನ ಬಾರಿ ವ್ಯಕ್ತಿಗತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ’: ಸರಕಾರಿ ಇಲಾಖಾ ಸೌಲಭ್ಯ ವಿತರಿಸಿ ಹರೀಶ್ ಪೂಂಜ ಹೇಳಿಕೆ

ಬೆಳ್ತಂಗಡಿ: ಕಳೆದ ಐದು ವರ್ಷಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಶಿಕ್ಷಣ, ವಿದ್ಯುತ್ ಇತ್ಯಾದಿ ವಿಚಾರಗಳಲ್ಲಿ ಅತೀ ಹೆಚ್ಚು ಅನುದಾನ ಬೆಳ್ತಂಗಡಿಗೆ ತರಲಾಗಿದ್ದು ಸಮುದಾಯ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮುಂದಿನ ಬಾರಿ‌ ನೀವು ಆಶೀರ್ವಾದ ಮಾಡಿದಲ್ಲಿ ವಕ್ತಿಗತ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ ಆಡಳಿತ ಸೌಧದ ಬಳಿ ಮಾ‌18ರಂದು ತಾ.ಪಂ ಬೆಳ್ತಂಗಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ನಡೆದ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ನೀಡಲ್ಪಡುವ ಸಾಧನ ಸಲಕರಣೆಗಳ ವಿತರಣೆ ಮಾಡಿ ಅವರು ಮಾತನಾಡಿದರು.

ಸೌಲಭ್ಯಗಳ ವಿತರಣೆ;

12 ಜನ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ರೆಟ್ರೋ ಫಿಟ್ ಮೆಂಟ್,
6 ಜನ ವಿಶೇಷ ಚೇತನ ಫಲಾನುಭವಿಗಳಿಗೆ ಶ್ರವಣ ಸಾಧನ, 3 ಜನ ವಿಶೇಷ ಚೇತನ ಫಲಾನುಭವಿಗಳಿಗೆ ಅಧ್ಯಯನ ಮಾಡುವ ಗಾಲಿ ಕುರ್ಚಿ, 2 ಜನ ವಿಶೇಷ ಚೇತನ ಫಲಾನುಭವಿಗಳಿಗೆ ಒರಗುವ ಗಾಲಿ ಕುರ್ಚಿ, 129 ಜನ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, 23 ಜನ ಕೃಷಿಕ ಫಲಾನುಭವಿಗಳಿಗೆ ಕೃಷಿ ಸಾಧನಾ ಸಲಕರಣಗಳನ್ನು ವಿತರಿಸಲಾಯಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಹೆಗ್ಡೆ, ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ತಾ.ಪಂ. ಸಂಯೋಜಕ ಜಾನ್ ಬ್ಯಾಸ್ಟಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರ್ವಹಿಸಿದರು.

Exit mobile version