Site icon Suddi Belthangady

ಬೆಳ್ತಂಗಡಿ ಪ್ರವಾಸಿ ಬಂಗಲೆ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ: ಸೂಕ್ತ ಕ್ರಮಕ್ಕೆ ಆಗ್ರಹ

ಬೆಳ್ತಂಗಡಿ: ಬೆಳ್ತಂಗಡಿ ಪ್ರವಾಸಿ ಬಂಗಲೆ ಕಟ್ಟಡದ 2ನೇ ಹಂತದ ಕಾಮಗಾರಿಯನ್ನು ಟೆಂಡರ್ ಕರೆಯದೆ ಮುಂಚಿತವಾಗಿ ಪೂರೈಸಿ ಪ್ರಸ್ತುತ ಟೆಂಡರ್ ಕರೆಯಲಾಗಿದೆ ಎಂದು ಸಿ.ಪಿ.ಎಂ. ಶೇಖರ್ ಎಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿಯಲ್ಲಿದ್ದ ಹಳೆಯ ಪ್ರವಾಸಿ ಬಂಗಲೆಯನ್ನು ಕೆಡವಿ ಅದೇ ಜಾಗದಲ್ಲಿ ಈಗ ಹೊಸತಾದ ಪ್ರವಾಸಿ ಬಂಗಲೆಯ ಕೆಲಸ ಕಾರ್ಯ ನಡೆಯುತ್ತಿದೆ. ಕಾಮಗಾರಿಯ ಮೊದಲನೇ ಹಂತದ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆದು ಅಮಲ್ ಕಾನ್ ಕಂಪೆನಿಯವರು ಮೊದಲನೇ ಹಂತದ ಕಾಮಗಾರಿಯನ್ನು ನಡೆಸಿದ್ದಾರೆ. ಕಂಪೆನಿಯವರು ವ್ಯಾಪಕ ಭ್ರಷ್ಟಾಚಾರ ನಡೆಸಿ ಕಾಮಗಾರಿಗಳನ್ನು ನಡೆಸುತ್ತಿದ್ದು, ಇತ್ತೀಚೆಗೆ ಮೂಡಬಿದಿರೆ ವಕೀಲರ ಭವನದ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಪ್ರಸ್ತುತ ತೆಲಂಗಾಣದ ರಾಜ್ಯಪಾಲರಾಗಿರುವ ಅಬ್ದುಲ್ ನಜೀರ್‌ ಅವರು ಕಟ್ಟಡದ ಕಳಪೆ ಕಾಮಗಾರಿ ನಡೆಸಿದ ಬಗ್ಗೆ ಆಕ್ರೋಶಗೊಂಡು ಸ್ಥಳದಲ್ಲಿಯೇ ಬಿಮಲ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಬೆಳ್ತಂಗಡಿಯಲ್ಲಿ ನಮ್ಮ ಇಲಾಖೆಯ ಅಧೀನದಲ್ಲಿ ಬರುವ ಪ್ರವಾಸಿ ಬಂಗಲೆಯ ಕಾಮಗಾರಿಯನ್ನು
ಯಾವುದೇ ಟೆಂಡರ್ ಇಲ್ಲದೆ, ಕಾಮಗಾರಿ ಆದೇಶ ಇಲ್ಲದೆ ಮುಂಚಿತವಾಗಿ 2ನೇ ಹಂತದ ಕಾಮಗಾರಿಯನ್ನು ಪೂರೈಸಿದ್ದಾರೆ. ಇದರಲ್ಲಿ ವ್ಯಾಪಕವಾಗಿ ಅವ್ಯವಹಾರ ಮತ್ತು ಭ್ರಷ್ಟಚಾರ ನಡೆದಿರುವುದು ಕಂಡುಬರುತ್ತದೆ. ಇದೀಗ ಇಲಾಖೆಯ ವತಿಯಿಂದ 2ನೇ ಕಾಮಗಾರಿಗೆ ಟೆಂಡ‌ರ್ ಕರೆದಿರುವುದಾಗಿ ತಿಳಿದು ಬಂದಿದ್ದು, ಮುಂಚಿತವಾಗಿ ತಾವು ಮಾಡಿರುವ ಕಾಮಗಾರಿಗೆ ಬಿಲ್ ಮಾಡಿಸಿಕೊಳ್ಳಲು ಕಂಪೆನಿಯವರು ಪ್ರಯತ್ನಿಸುತ್ತಿದ್ದು ಬೇರೆ ಯಾವುದೇ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅಧಿಕಾರಿಗಳ ಮೂಲಕ ಒತ್ತಡ ಹೇರಿರುವುದಾಗಿ ತಿಳಿದು ಬಂದಿರುತ್ತದೆ. ಇದು ಸರಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜನರು ಕಟ್ಟಿದ ತೆರಿಗೆ ಹಣವನ್ನು ಲೂಟಿ ಮಾಡುವ ಹುನ್ನಾರವಾಗಿರುತ್ತದೆ. ಇದಕ್ಕೆ ನಾಗರಿಕರ ಪರವಾಗಿ ಸಂಪೂರ್ಣ ಆಕ್ಷೇಪ ಇದೆ ಎಂದು ಶೇಖರ್ ತಿಳಿಸಿದ್ದಾರೆ.

Exit mobile version