Site icon Suddi Belthangady

ನೆರಿಯ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಅನಿಯಂತ್ರಿತ ಲೋಡ್ ಶೇಡ್ಡಿಂಗ್-ಸರಿಪಡಿಸುವಂತೆ ಕೆ ಎಸ್.ಎಂ.ಸಿ.ಎ ಮನವಿ

ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಮೂರು ಜಲ ವಿದ್ಯುತ್ ಘಟಕಗಳು ನೆರಿಯ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ನೆರಿಯ ಗ್ರಾಮದ ಒಳ ಪ್ರದೇಶಗಳು ಹಾಗೂ ಗಂಡಿಬಾಗಿಲು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬರುತ್ತಿದ್ದು ಕೃಷಿ ಚಟುವಟಿಕೆ ಗಳು ಕುಂಠಿತವಾಗಿದೆ. ಈಗಾಗಲೇ ಅಡಿಕೆ ತೋಟಗಳು ನೀರಿಲ್ಲದೆ ಒಣಗಲು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು ಮನೆಯಲ್ಲಿ ಕಲಿಕೆ ಕ್ಯಾಂಡಲ್ ಬೆಳಕಿಗೆ ಪರಿವರ್ತಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯು ರೈತರ ಮತ್ತು ವಿದ್ಯಾರ್ಥಿಗಳಬದುಕಿನ ಮತ್ತು ಭವಿಷ್ಯದ ಜೊತೆಗಿನ ಚೆಲ್ಲಾಟ ವನ್ನು ಕೊನೆಗೊಳಿಸಿ ತಕ್ಷಣವೇ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಕರ್ನಾಟಕ ಸೀರೋಮಲ ಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ಗಂಡಿಬಾಗಿಲು ಇದರ ವತಿಯಿಂದ ಮೆಸ್ಕಾಂ ಮುಂಡಾಜೆಯ ಕಿರಿಯ ಅಭಿಯಂತರ ಕೃಷ್ಣೇ ಗೌಡರವರಿಗೆ ಮನವಿ ನೀಡಲಾಯಿತು. ಕೆ ಎಸ್ ಎಂ ಸಿ ಎ ಪ್ರಾಂತಿಯ ಪ್ರಧಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ. ಜೆ, ಅಧ್ಯಕ್ಷ ಬೇಬಿ ವಿ.ಟಿ, ಉಪಾಧ್ಯಕ್ಷರಾದ ಮನೋಜ್ ಮಾದವತ್ , ವರ್ಗಿಸ್ ಎಂ ಜೆ , ಜೋಸೆಫ್ ಪಿ ಪಿ, ಜೋಬಿನ್ಸ್ ಮಾದವತ್, ಜೋಮೋನ್ ವಡಕ್ಕೆಟ್ ಮೊದಲಾದವರು ನಿಯೋಗದಲ್ಲಿದ್ದರು.
ವಿದ್ಯುತ್ ಫ್ಯೂಸ್ ನಲ್ಲಿನ ಸಮಸ್ಯೆ ಗಳನ್ನು ಪರಿಹರಿಸುವುದು, ಬೆಳಗ್ಗಿನ ಜಾವ ಮತ್ತು ಸಂಜೆ ಹೊತ್ತಿನ ಲೋಡ್ ಶೆಡ್ಡಿಂಗ್ ಕೊನೆಗೊಳಿಸುವುದು, ಕೃಷಿಗೆ ವ್ಯವಸ್ಥಿತವಾಗಿ 3 ಫೇಸ್ ವಿದ್ಯುತ್ ಪೂರೈಸುವುದು, ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಅಡಚಣೆ ಆಗದಂತೆ ವಿದ್ಯುತ್ ಪೂರೈಸುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.


Exit mobile version