ಬೆಳ್ತಂಗಡಿ: ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಇನ್ಸೂರೆನ್ಸ್ ಮಾಡಿಸಲು ಕಸ್ಟಮರ್ ಕೇರ್ ನಂಬರಿಗೆ ಕರೆ ಮಾಡಿದ ಇಬ್ಬರು ವಂಚಕರ ಕೈಗೆ ಸಿಕ್ಕಿ Any Desk app ಮೂಲಕ 2,25125 ರೂಪಾಯಿ ಕಳೆದುಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿಯ ಚಿನ್ನದ ವ್ಯಾಪಾರಿ ಮತ್ತು ಅವರ ಸ್ನೇಹಿತರಾಗಿರುವ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಹಣ ಕಳೆದುಕೊಂಡವರು. ಚಿನ್ನದ ವ್ಯಾಪಾರಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದು ಇದಕ್ಕೆ ಆನ್ ಲೈನ್ ಮೂಲಕ ಬ್ಯಾಂಕ್ ಕಡೆಯಿಂದ ಇನ್ಸೂರೆನ್ಸ್ ಮಾಡಿಸಲು ಹೇಳಿದ್ದರು. ಈ ವೇಳೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾಗ, ಕರೆ ಸಿಗದಿದ್ದಾಗ ಮತ್ತೆ ಪ್ರಯತ್ನಿಸಿದ್ದರು. ಈ ಸಂದರ್ಭ ನಂಬರ್ ಹ್ಯಾಕ್ ಆಗಿ ಬೇರೆ ಸಂಖ್ಯೆಗೆ ಬದಲಾವಣೆ ಆಗಿ ವಂಚಕರಿಗೆ ಸಿಕ್ಕಿಬಿದ್ದಿದ್ದಾರೆ. ಅವರು ಕರೆ ಸ್ವೀಕರಿಸಿ Any Desk App ಡೌನ್ಲೋಡ್ ಮಾಡಲು ಹೇಳಿದ್ದಾರೆ.
ಇನ್ಸೂರೆನ್ಸ್ ಆನ್ ಲೈನ್ ಮೂಲಕ ಮಾಡಲಾಗುವುದು ಎಂದಿದ್ದಾರೆ. ನಂತರ ಚಿನ್ನದ ವ್ಯಾಪಾರಿಗೆ ಆನ್ ಲೈನ್ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಸ್ನೇಹಿತ ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಕೂಡ ಸಹಾಯ ಮಾಡಿದ್ದಾರೆ. ಕೊನೆಗೆ ಚಿನ್ನದ ವ್ಯಾಪಾರಿಯ ಖಾತೆಯಿಂದ 1,56,298 ರೂಪಾಯಿ ಮತ್ತು ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಖಾತೆಯಿಂದ 68,828 ರೂಪಾಯಿ ಸೇರಿ ಒಟ್ಟು 2,25125 ರೂಪಾಯಿ ವಂಚಕರು ದೋಚಿದ್ದಾರೆ.
ಈ ಬಗ್ಗೆ ಇಬ್ಬರು ಸ್ನೇಹಿತರು ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.