Site icon Suddi Belthangady

ಮಾ.8: ಧರ್ಮಸ್ಥಳದಲ್ಲಿ ಮಹಿಳಾ ಸಮಾವೇಶ: ಭಾರತೀಯ ಸಣ್ಣ ಉದ್ದಿಮೆಗಳ ಬ್ಯಾಂಕ್ ಅಧ್ಯಕ್ಷ ಶಿವಸುಬ್ರಹ್ಮಣ್ಯಂ ರಾಮನ್ ಭಾಗಿ

ಪತ್ರಿಕಾ ಗೋಷ್ಠಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾ.8 ರಂದು ಮಹಿಳಾ ದಿನಾಚರಣೆಯ ಅಂಗವಾಗಿ ಧರ್ಮಸ್ಥಳದಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ ನಡೆಯಲಿದೆ, ಸಮಾವೇಶದಲ್ಲಿ ಭಾರತೀಯ ಸಣ್ಣ ಉದ್ದಿಮೆಗಳ ಬ್ಯಾಂಕ್ (ಸಿಡ್ಬಿ)ಅಧ್ಯಕ್ಷ ಶಿವಸುಬ್ರಹ್ಮಣ್ಯಂ ರಾಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಎಚ್. ಮಂಜುನಾಥ್ ಹೇಳಿದರು. ಅವರು ಮಾ.6 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮುಂಜಾನೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು “ಅಮೃತ ಸಿಂಚನ `ಪ್ರಯಾಸ್ ಯೋಜನಾ’ ಎನ್ನುವ ಮಹಿಳಾ ಉದ್ದಿಮೆದಾರರ ಯಶೋಗಾಥೆಗಳ ಪುಸ್ತಕ ಬಿಡುಗಡೆಗೊಳ್ಳಲಿದೆ.
ಎರಡು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಲ್ಲಿ ಸ್ವ ಉದ್ಯೋಗ ಮತ್ತು ಉದ್ದಿಮೆಶೀಲತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಕರ್ನಾಟಕದಾದ್ಯಂತ ಸುಮಾರು 10 ಲಕ್ಷಕ್ಕೂ ಮಿಕ್ಕಿದ ಮಹಿಳೆಯರು ವಿವಿಧ ರೀತಿಯ ಸ್ವ ಉದ್ಯೋಗಗಳನ್ನು ಪ್ರಾರಂಭಿಸಿಕೊಂಡು ಯಶಸ್ಸುಗೊಳಿಸಿದ್ದಾರೆ. ಮಹಿಳಾ ಉದ್ದಿಮೆದಾರರಿಗೆ ಅಗತ್ಯವಿರುವ ಹಣಕಾಸಿನ ನೆರವು ಸುಲಭ ದರಗಳಲ್ಲಿ ದೊರೆಯಬೇಕೆಂಬ ಉದ್ದೇಶದಿಂದ ಸಿಡ್ಬಿ ಸಂಸ್ಥೆಯು ಜಾರಿಗೆ ತಂದಿರುವ ‘ಪ್ರಯಾಸ್ ಯೋಜನೆ’ಯನ್ನು ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನುಷ್ಠಾನಿಸುತ್ತಿದ್ದು, ಕಳೆದೆರಡು ವರ್ಷಗಳಲ್ಲಿ 22,500 ಮಹಿಳಾ ಉದ್ದಿಮೆದಾರರಿಗೆ ಸ್ವಉದ್ಯೋಗಗಳನ್ನು ಕೈಗೊಳ್ಳಲು ಸುಮಾರು ರೂ. 700 ಕೋಟಿಯವರೆಗಿನ ನೆರವನ್ನು ಒದಗಿಸಲಾಗಿದೆ. ಈ ಹಿನ್ನಲೆಯಲ್ಲಿ “ಮಹಿಳಾ ಉದ್ದಿಮೆದಾರರ ಸಮಾವೇಶ”ವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಆಯೋಜಿಸಿದ್ದು, ಆಯ ಮಹಿಳಾ ಉದ್ದಿಮೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು, ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಮತ್ತು ಸಿಡ್ಬಿ ಅಧ್ಯಕ್ಷರು ಶಿವ ಸುಬ್ರಹ್ಮಣ್ಯಂ, ಮುಖ್ಯ ಪ್ರಬಂಧಕ ರವಿ ತ್ಯಾಗಿ ಮುಖ್ಯ ಅತಿಥಿಗಳಾಗಿರುವರು, ಕಾರ್ಯಗಾರದಲ್ಲಿ ಮಹಿಳಾ ಉದ್ದಿಮೆದಾರರಿಗೆ ಲೆಕ್ಕ ಪತ್ರಗಳ ನಿರ್ವಹಣೆ, ಲೆಕ್ಕಪರಿವೀಕ್ಷಣೆ, ಇನ್‌ಕಮ್‌ ಟ್ಯಾಕ್ಸ್ ನಿಯಮಗಳು ಮತ್ತು ಜಿಎಸ್‌ಟಿ ನಿಯಮಗಳ ಬಗ್ಗೆ ಮಾಹಿತಿಯನ್ನು ತಜ್ಞರುಗಳು ನೀಡಲಿದ್ದಾರೆ. ಮಹಿಳೆಯರ ಉದ್ದಿಮೆಶೀಲತೆ ಮನೋಭಾವ. ವೈಶಿಷ್ಟ್ಯತೆಗಳ ಕುರಿತಾಗಿಯೂ ಕೂಡಾ ಮಾಹಿತಿಯನ್ನು ಒದಗಿಸಲಾಗುವುದು. ಕಾರ್ಯಗಾರದಲ್ಲಿ ವಿವಿಧ ತಂತ್ರಾಂಶಗಳ ಕುರಿತಾಗಿಯೂ ವಿಸ್ತ್ರತವಾದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಆನ್‌ಲೈನ್ ಮಾರ್ಕೆಟಿಂಗ್, ಫ್ಲಾಟ್‌ಫಾರ್ಮ್‌ಗಳ ಬಗ್ಗೆ, ಬಿಲ್ಲಿಂಗ್ ಸಾಫ್ಟ್‌ವೇ‌ರ್ ಗಳ ಬಗ್ಗೆ, ಪೇಮೆಂಟ್ ಆಪ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಕಾರ್ಯಕ್ರಮದಲ್ಲಿ ಮಹಿಳಾ ಉದ್ದಿಮೆ ದಾರದ ಸಮಸ್ಯೆಗಳನ್ನು ಸವಾಲುಗಳನ್ನು ಚರ್ಚಿಸಲು ಮುಖ್ಯವೇದಿಕೆಯನ್ನು ಕಲ್ಪಿಸಲಾಗಿದ್ದು. ಉದ್ದಿಮೆದಾರರು ತಮ್ಮ ಅಭಿಪ್ರಾಯವನ್ನು ಸಲ್ಲಿಸಲು ಅವಕಾಶವನ್ನು ಒದಗಿಸಲಾಗಿದೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಿಭಾಗದ ಮಹಾಪ್ರಬಂಧಕಿ ಶ್ರೀಮತಿ ಗಾಯತ್ರಿ ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಧರ್ಮಸ್ಥಳದ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಇದೇ ಸಂದರ್ಭ ಪ್ರಯಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಆಯ್ದ ‘ಫಲಾನುಭವಿಗಳಿಗೆ ಪ್ರಯಾಸ್‌, ಸಾಲ ಮಂಜೂರಾತಿ ಪತ್ರವನ್ನು ವಿತರಿಸಲಾಗುವುದು, ಮುಂದಿನ ದಿನಗಳಲ್ಲಿ ಪ್ರಯಾಸ್ ಯೋಜನೆಯನ್ನು ಇನ್ನಷ್ಟು ವಿಸ್ತರಿತ ರೂಪದಲ್ಲಿ ಕೈಗೊಳ್ಳಲು ಧರ್ಮಸ್ಥಳ ಯೋಜನೆ ಮತ್ತು ಸಿಡ್ಬಿ ಸಂಸ್ಥೆಗಳು ನಿರ್ಧರಿಸಿದ್ದು, ಮುಂದಿನ ವರ್ಷಕ್ಕೆ ರೂ. 500 ಕೋಟಿ ಬೇಡಿಕೆಯನ್ನು ಈಗಾಗಲೇ ಸಿಡ್ಬಿ ಸಂಸ್ಥೆಗೆ ನೀಡಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ ವಿಭಾಗದ ನಿರ್ದೇಶಕ ವಸಂತ ಬಿ. ಯೋಜನಾಧಿಕಾರಿ ಸುರೇಂದ್ರ, ನಿರಂತರ ಪತ್ರಿಕೆಯ ನಿರ್ದೇಶಕ ಚಂದ್ರಹಾಸ ಚಾರ್ಮಾಡಿ, ವರದಿಗಾರ ಪ್ರಶಾಂತ್ ಉಪಸ್ಥಿತರಿದ್ದರು.

Exit mobile version