Site icon Suddi Belthangady

ಕೋಟಿಕಟ್ಟೆ-ಮುಂಡೂರು: ಶ್ರೀ ಮಹಮ್ಮಾಯಿ ದೇವಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ವಾರ್ಷಿಕ ಮಾರಿಪೂಜೆ

ಮುಂಡೂರು:ಕೋಟಿಕಟ್ಟೆ-ಮುಂಡೂರು ಶ್ರೀ ಮಹಮ್ಮಾಯಿ ದೇವಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ವಾರ್ಷಿಕ ಮಾರಿಪೂಜೆ ಕಾರ್ಯಕ್ರಮವು ಫೆ.23 ಮತ್ತು 24 ರಂದು ನಡೆಯಿತು.

ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಅನೇಕ ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ವರ್ಷಂಪ್ರತಿ ಶ್ರೀ ಮಾರಿ ಪೂಜೆ ಕಾರ್ಯಕ್ರಮ ಹಾಗೂ ಊರಿಗೆ ಬರುವ ರೋಗ ರುಜಿನಗಳನ್ನು ಹೋಗಲಾಡಿಸಲು ಊರ ಮಾರಿ ಓಡಿಸುವ ಕಾರ್ಯವನ್ನು ಕೋಟಿಕಟ್ಟೆಯ ಆಸುಪಾಸಿನ ಮುಂಡೂರು, ಮೇಲಂತಬೆಟ್ಟು, ಕರಂಬಾರು, ತೆಂಕಕಾರಂದೂರು ಗ್ರಾಮದ ಭಕ್ತಾದಿಗಳು ನಡೆಸಿಕೊಂಡು ಬರುತ್ತಿದ್ದು ಈ ಕ್ಷೇತ್ರದಲ್ಲಿ ಶ್ರೀ ಮಹಮ್ಮಾಯಿ ಕಟ್ಟೆ ಶಿಥಿಲಾವಸ್ಥೆಯಲ್ಲಿರುವುದರಿಂದ ಇದರ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲು ಸ್ಥಳದಲ್ಲಿ ಪ್ರಶ್ನಾ ಚಿಂತನೆ ನಡೆಸಿದ ಪ್ರಕಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಮ್ಮಾಯಿ ದೇವಿಯ ಶಿಲಾಮಯ ಕಟ್ಟೆ ನಿರ್ಮಾಣ, ಅಡುಗೆ ಕೋಣೆ, ಕಟ್ಟಡ, ಕಛೇರಿ ಕಟ್ಟಡ ಮತ್ತು ಆವರಣದ ಗೋಡೆ ಇತ್ಯಾದಿ ಜೀರ್ಣೋದ್ಧಾರ ಕಾರ್ಯವನ್ನು ಶ್ರದ್ಧಾ ಭಕ್ತಿಯೊಂದಿಗೆ ಗ್ರಾಮಸ್ಥರು ಮತ್ತು ಊರ ಪರಊರ ಭಕ್ತಾದಿಗಳ ಸಹಕಾರದಲ್ಲಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣದ ಕೆಲಸ ಕಾರ್ಯಗಳು ನಡೆದಿದೆ. ಇದೀಗ ಕ್ಷೇತ್ರದಲ್ಲಿ ಶ್ರೀ ಮಹಮ್ಮಾಯಿ ದೇವಿಯ ಶಿಲಾಮಯ ಕಟ್ಟೆಯಲ್ಲಿ ದೇವಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಮಾರಿಪೂಜೆ ಕಾರ್ಯಕ್ರಮ, ಶ್ರೀ ದೇವಿಯ ಕಲಶಾಭಿಷೇಕದ ಕಾರ್ಯಕ್ರಮಗಳು ನಡೆಯಿತು.ವೈದಿಕ ವಿಧಿ ವಿಧಾನಗಳು ಶ್ರೀ ರಂಗನಾಥ ನೂರಿತ್ತಾಯರವರ ಮಾರ್ಗದರ್ಶನದಲ್ಲಿ ನಡೆಯಿತು.

ಶುದ್ಧ ಪುಣ್ಯಾಹ ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರಕಾರಬಲಿ, ಶ್ರೀ ಮಹಮ್ಮಾಯಿ ದೇವಿಯ ಅಧಿವಾಸ ಪೂಜೆ ನಡೆಯಿತು.
ಬೆಳಿಗ್ಗೆ 12 ಕಾಯಿ ಗಣಪತಿ ಹೋಮ, ಬ್ರಹ್ಮರಿಗೆ ಪರ್ವ, ಪಂಚವಿಂಷತಿ ಕಲಶ ಪೂಜೆ, ಪ್ರಧಾನ ಹೋಮ, ಪ್ರತಿಷ್ಠಾ ಕಲಶ, ಶ್ರೀ ವೇದವ್ಯಾಸ ಶಿಶುಮಂದಿರ ಗುರುವಾಯನಕೆರೆ ಇದರ ಬಾಲ ಗೋಕುಲದ ಮಕ್ಕಳಿಂದ ಮತ್ತು ಶ್ರೀ ಭ್ರಾಮರಿ ಮಕ್ಕಳ ಕುಣಿತಾ ಭಜನಾ ಮಂಡಳಿ ಗುರುವಾಯನಕೆರೆ, ಶ್ರೀ ನವಶಕ್ತಿ ಮುಂಡೂರು ಇದರ ಸದಸ್ಯರಿಂದ ಕುಣಿತ ಭಜನೆ, ಶ್ರೀ ದೇವಿಯ ಪ್ರತಿಷ್ಠೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

Exit mobile version