Site icon Suddi Belthangady

ಶ್ರೀ ಧ.ಆಂ.ಮಾಧ್ಯಮ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಉಜಿರೆ: 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಅದ್ದೂರಿ ತಯಾರಿಯೊಂದಿಗೆ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನೆರವೇರಿತು. ಭವಿಷ್ಯದ ಮುನ್ನುಡಿ ಬರೆಯಲು ಮುಂದಡಿ ಇಡುವ ಪ್ರಮುಖ ಘಟ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಶಾಲೆಯ ನೆನಪುಗಳನ್ನು ಸದಾ ಸ್ಮೃತಿಪಟಲದಲ್ಲಿ ಇರಿಸುವಂತೆ ಮಾಡುವ ಫೋಟೋ ಕಾರ್ನರ್ ಮಿಂಚುವ ಬಲ್ಬುಗಳಿಂದ ಕೈಬೀಸಿ ಕರೆಯುತ್ತಿತ್ತು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಇವರು ಉಪಸ್ಥಿತರಿದ್ದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿಕೊಂಡು ಮೌಲ್ಯಯುತ ಮಾತುಗಳನ್ನು ಹೇಳಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಯು ತನ್ನ ಜೀವನದಲ್ಲಿ ಉತ್ತಮ ಗುಣಗಳನ್ನು ಹೊಂದಿರಬೇಕು. ತಮ್ಮ ಜೀವನವನ್ನು ಬಹುಬೇಗ ಹಾಳುಗೆಡಹುವ ಯೋಚನೆಗಳನ್ನು ಕೈಬಿಟ್ಟು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತರಗತಿ ಶಿಕ್ಷಕಿಯರಾದ ಶ್ರೀಮತಿ ಸನ್ಮತಿ ಮತ್ತು ಶ್ರೀಮತಿ ಶೀಭಾ ಇವರ ನುಡಿದರು.ಕಿರಿಯ ವಿದ್ಯಾರ್ಥಿಗಳ ನೃತ್ಯಗಳೊಂದಿಗೆ ಮನರಂಜಿಸಿದ ಕಾರ್ಯಕ್ರಮವು ಎಲ್ಲ ಶಿಕ್ಷಕರ ಶುಭಾಶೀರ್ವಾದದ ಸ್ಲೈಡ್ ನೊಂದಿಗೆ ಮುಂದುವರೆಯಿತು. ಬೀಳ್ಕೊಳ್ಳಲಿರುವ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಪಡೆದ ಅನುಭವಗಳ ಅರಿವಿನ ಭಂಡಾರದ ಕಣಜಗಳ ಮೆಲುಕು ಹಾಕಿದರು. ನಂತರ ತಮ್ಮ ವಿದ್ಯಾರ್ಜನೆಯ ಸುದೀರ್ಘ ಪಯಣಕ್ಕೆ ಅವಕಾಶ ಕಲ್ಪಿಸಿದ ಶಾಲೆಗೆ ಗಣಿತ ಆಕೃತಿಗಳ ಕಿರು ಕಾಣಿಕೆಯನ್ನು ಸಮರ್ಪಿಸಿದರು. ಹೀಗೆ ಮುಂದುವರೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಮನರಂಜನ ಆಟಗಳನ್ನು ನಡೆಸಿ ಬಹುಮಾನಗಳನ್ನು ನೀಡಿದರು.

ಶಾಲಾ ಸಂಪ್ರದಾಯದಂತೆ 8, 9ನೇ ತರಗತಿಯ ವಿದ್ಯಾರ್ಥಿಗಳ ಯೋಜನೆಯಲ್ಲಿ ಶಾಲಾ ಪ್ರವೇಶ ದ್ವಾರವು ವಿಶೇಷವಾಗಿ ಅಲಂಕೃತಗೊಂಡು, ಭಾವಚಿತ್ರಗಳ ಭಿತ್ತಿ ಪತ್ರಿಕೆಯು ಆಕರ್ಷಕವಾಗಿ ಮೂಡಿಬಂತು. ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. 9ನೇ ತರಗತಿಯ ರೇವಂತ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಸಮನ್ವಿ ನಿರೂಪಿಸಿ, ವಂದಿಸಿದರು.

Exit mobile version