Site icon Suddi Belthangady

ಮುಂಡಾಜೆ: ಕಬಡ್ಡಿ ಪಂದ್ಯಾಟದಲ್ಲಿ ಹೊಡೆದಾಟ: ವಿಡಿಯೋ ವೈರಲ್

ಮುಂಡಾಜೆ : ಕಬಡ್ಡಿ ಪಂದ್ಯಾವಳಿಯ ವೇಳೆ ಅಂಕಣದ ಹೊರಗಡೆ ಪ್ರೇಕ್ಷಕರ ಎರಡು ತಂಡ ಹೊಡೆದಾಡಿಕೊಂಡ ಘಟನೆ ಮುಂಡಾಜೆಯಲ್ಲಿ ಫೆ. 19 ರಂದು ನಡೆದಿದ್ದು, ಇದು ಪಂದ್ಯಾಟದ ಆಯೋಜಕರು ಮತ್ತು ಆಟಗಾರರ ಮಧ್ಯೆ ನಡೆದ ಹೊಡೆದಾಟ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿತವಾಗಿ ವೈರಲ್ ಆದ ಹಾಗೂ ಘಟನೆಗೂ ಆಯೋಜಕರಿಗೂ ಆಟಗಾರರಿಗೂ ಸಂಬಂಧವಿಲ್ಲವೆಂದು ಕಂಡುಬಂದ ಘಟನೆ ವರದಿಯಾಗಿದೆ.

ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಮುಂಡಾಜೆಯಲ್ಲಿ ಫೆ.19 ರಂದು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯ ವೇಳೆ ಈ ತಂಡದ ನಡುವೆ ಚಕಮಕಿ ನಡೆದಿತ್ತು. ಎರಡು ದಿನದ ಬಳಿಕ ಈ ಘಟನೆಗೆ ರಂಗು ಬಂದು ಅಭಿಮಾನಿಗಳು ಮತ್ತು ಆಟಗಾರರ ಮಧ್ಯೆ ಗಲಾಟೆ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೊಡೆದಾಟದ ವಿಡಿಯೋ ಸಹಿತ ವರದಿ ವೈರಲ್ ಆಗಿತ್ತು.
ಈ ಬಗ್ಗೆ ಸಂಘಟಕರು ಮತ್ತು ಸ್ಥಳೀಯ ಪ್ರಮುಖರಲ್ಲಿ ‘ಸುದ್ದಿ’ ವಿಚಾರಿಸಿದಾಗ ಗಲಾಟೆ ನಡೆದಿರುವುದು ಕಬಡ್ಡಿ ಅಂಕಣದ ಹೊರಗಡೆ ಮತ್ತು ಆಯೋಜಕರಿಗೂ ಹೊಡೆದಾಟಕ್ಕೂ ಸಂಬಂಧವಿಲ್ಲವೆಂದು ಕಂಡುಬಂದಿದೆ.

“ಎರಡು ತಂಡಗಳು ಆಟವಾಡುವಾಗ ತೀರ್ಪುಗಾರರರು ನೀಡಿದ ತೀರ್ಪೊಂದರ ಬಗ್ಗೆ ಆ ತಂಡಗಳ ಮಧ್ಯೆ ಬಿನ್ನ ಅಭಿಪ್ರಾಯಗಳು ಬಂದಿತು ಅದನ್ನು ಬಳಿಕ ಆ ತಂಡಗಳವರೇ ಬಗೆಹರಿಸಿಕೊಂಡರು. ಈ ಸಂದರ್ಭ ಪ್ರೇಕ್ಷಕರ ಎರಡು ತಂಡಗಳು ಮಾತಿನ ಚಕಮಕಿ ನಡೆಸಿ, ಪರಸ್ಪರ ಹೊಡೆದಾಡಿಕೊಂಡದ್ದು ನಮ್ಮ ಗಮನಕ್ಕೆ ಬಂತು.ಇಂತಹದಕ್ಕೆಲ್ಲ ಇಲ್ಲಿ ಅವಕಾಶವಿಲ್ಲವೆಂದು ನಾವು ಮೈಕ್ ಅನೌನ್ಸ್ ಮಾಡಿದೆವು. ಬಳಿಕ ಗಲಾಟೆ ನಿಂತಿತ್ತು. ಪಂದ್ಯಾಟದ ಆಯೋಜಕರಿಗೂ ಈ ಘಟನೆಗೂ ಸಂಬಂಧವಿಲ್ಲ. ಯಾರೋ ಕೆಲವರು ದುರುದ್ದೇಶಪೂರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿದ್ದಾರೆ” ಎಂದು ಸಂಘಟಕರಲ್ಲಿ ಪ್ರಮುಖರಾದ ಚೆನ್ನಕೇಶವ ಅರಸಮಜಲು ತಿಳಿಸಿದ್ದಾರೆ. ಸ್ಥಳೀಯರಾದ ಗಿರೀಶ್ ರೈ ಹಾಗೂ ನಾಮದೇವ ರಾವ್ ರವರುಗಳು ಕೂಡ ಹೊಡೆದಾಟದ ಘಟನೆಗೂ ಪಂದ್ಯಾಟಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Exit mobile version