ಬೆಳ್ತಂಗಡಿ: ಸಮುದಾಯದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಸಮುದಾಯದ ಒಗ್ಗಟ್ಟಿಗೆ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿವೆ. ನಮ್ಮ ಸಮುದಾಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಘದ ವತಿಯಿಂದ ಸಾಧ್ಯವಾದಷ್ಟು ಪ್ರಯತ್ನಿಸಲಾಗುತ್ತಿದೆ ಎಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರ್ ಹೇಳಿದರು.
ಅವರು ಮಲೆಕುಡಿಯರ ಸಂಘ ರಿ. ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಸಮಾವೇಶ ಪ್ರಯುಕ್ತ ಬೆಳ್ತಂಗಡಿ, ಲಾಯಿಲ ಪಡ್ಲಾಡಿ ಹಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೆಕುಡಿಯರ ಮುಕ್ತ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಬರುವ ಮಾ. 4ರಂದು ಬೆಳ್ತಂಗಡಿ ಕೊಯ್ಯೂರು-ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ ವಾರ್ಷಿಕ ಸಮಾವೇಶ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಪ್ರಯುಕ್ತವಾಗಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಸಮುದಾಯದ ಕ್ರೀಡಾಸ್ಫೂರ್ತಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕ್ರೀಡಾಕೂಟವನ್ನು ಲಾಯಿಲ ಕೆದ್ದೇಲು ಮನೆಯ ಸುಂದರ ಎಂ.ಕೆ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮಲೆಕುಡಿಯರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಸಿ ಉಜಿರೆ, ಉಡುಪಿ ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಗಂಗಾಧರ್ ಈದು, ಪಡ್ಲಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸೂರಪ್ಪ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಲಾಯಿಲ ಗ್ರಾ. ಪಂ. ಸದಸ್ಯೆ ಶ್ರೀಮತಿ ಜಯಂತಿ, ರಾಜ್ಯ ಮಲೆಕುಡಿಯ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ಆಲಂಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಸ್ವಾಗತಿಸಿ, ತಾಲೂಕು ಸಮಿತಿಯ ಸುಂದರ ಶಿಶಿಲ ಧನ್ಯವಾದ ಸಲ್ಲಿಸಿದರು. ರಾಜ್ಯ ಮಲೆಕುಡಿಯ ಸಂಘದ ಪ್ರ.ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.