Site icon Suddi Belthangady

ಫೆ.18 : ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳ ಗಡಣ: ಭಕ್ತಾದಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ ಫೆ.18 ರಂದು ನಡೆಯುವ ಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಪಾದಯಾತ್ರಿಗಳ ಗಡಣ: ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಭದ್ರಾವತಿ, ಹಾಸನ,  ದಾವಣಗೆರೆ ಮೊದಲಾದ ಊರುಗಳಿಂದ ಪ್ರತಿ ವರ್ಷದಂತೆ  ವಿವಿಧ ಪಾದಯಾತ್ರಿಗಳ ಸಂಘಟನೆಗಳ ಮೂಲಕ ಭಕ್ತಾದಿಗಳು ಶಿವನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ.
ಸುಮಾರು ಐವತ್ತು ಸಾವಿರ ಮಂದಿ ಪಾದಯಾತ್ರಿಗಳು ಈಗಾಗಲೆ ಧರ್ಮಸ್ಥಳಕ್ಕೆ ಬರುವುದಾಗಿ ಹೆಸರು ನೋಂದಾಯಿಸಿದ್ದಾರೆ. ಪಾದಯಾತ್ರಿಗಳ ಮಾಹಿತಿಗಾಗಿ 55 ಕಡೆಗಳಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪಾದಯಾತ್ರೆಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ, ಸ್ವಚ್ಛತೆ ಕಾಪಾಡುವಂತೆ ನಿದೇರ್ಶನ ನೀಡಲಾಗಿದೆ.
ವಸತಿ ವ್ಯವಸ್ಥೆ: ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಂಗಣ, ಅನ್ನಪೂರ್ಣ ಛತ್ರದ ಹಿಂಭಾಗ, ಗಂಗೋತ್ರಿ, ಸಾಕೇತ ವಸತಿಛತ್ರಗಳಲ್ಲಿ ಪಾದಯಾತ್ರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ.


ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಸ್ವಾಗತ ಕಾರ್ಯಾಲಯ ಹಾಗೂ ಮಾಹಿತಿ ಕಾರ್ಯಾಲಯ ತೆರೆದಿದ್ದು ಪಾದಯಾತ್ರಿಗಳ ಸ್ವಾಗತ ಮತ್ತು ಆತಿಥ್ಯಕ್ಕೆ ಸ್ವಯಂ ಸೇವಕರ ತಂಡ ಸಜ್ಜಾಗಿದೆ.
ಎಸ್.ಡಿ.ಎಂ. ಆಸ್ಪತ್ರೆಯ ಆಶ್ರಯದಲ್ಲಿ 15 ಮಂದಿ ವೈದ್ಯರ ತಂಡ ಪಾದಯಾತ್ರಿಗಳ ಉಚಿತ ಸೇವೆಗೆ ಸಿದ್ದರಾಗಿದ್ದಾರೆ.
ಶಿವರಾತ್ರಿ ಜಾಗರಣೆ, ಉಪವಾಸ: ಶನಿವಾರ ಸಂಜೆ ಆರು ಗಂಟೆಗೆ ಧರ್ಮಸ್ಥಳದಲ್ಲಿ ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು. ಅವರ ಪ್ರವಚನದ ಬಳಿಕ ಇಡೀ ರಾತ್ರಿ ಭಕ್ತರು ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ಮಾಡುವರು.
ದೇವಸ್ಥಾನದಲ್ಲಿ ಸಂಜೆ ಆರು ಗಂಟೆಯಿಂದ ನಾಲ್ಕು ಜಾವಗಳಲ್ಲಿ ಅಹೋರಾತ್ರಿ  ಭಕ್ತರು ಶತರುದ್ರಾಭಿಷೇಕ, ಎಳನೀರು ಅಭಿಷೇಕ ಮಾಡಿ ಧನ್ಯತೆಯನ್ನು ಹೊಂದುವರು. ರಾತ್ರಿ ಇಡೀ ದೇವರ ದರ್ಶನಕ್ಕೆ ಅವಕಾಶವಿದ್ದು ಭಾನುವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯುತ್ತದೆ.
ಶಿವರಾತ್ರಿಗೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

Exit mobile version