ಧರ್ಮಸ್ಥಳ: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತರು ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು. ಯಕ್ಷಗಾನದ ದಂತಕಥೆ ಎನಿಸಿಕೊಂಡಿದ್ದ, ಬಲಿಪ ಶೈಲಿ ಮುಖಾಂತರ ಯಕ್ಷಗಾನದಲ್ಲಿ ಹೊಸ ಆಯಾಮ ಸೃಜಿಸಿದ್ದ ’ಯಕ್ಷರಂಗದ ಭೀಷ್ಮಜ್ಜ’ ಬಲಿಪ ನಾರಾಯಣ ಭಾಗವತರು ಅಜ್ಜ ಬಲಿಪರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿ ಕಟೀಲು ಮೇಳದಲ್ಲಿ ಸುದೀರ್ಘ ನಾಲ್ಕುವರೆ ದಶಕಗಳ ಕಲಾಸೇವೆಗೈದಿದ್ದರು. ತಮ್ಮ ಕಂಚಿನ ಕಂಠ ಮತ್ತು ರಂಗನಡೆಯಿಂದ ಪ್ರಸಿದ್ಧರಾಗಿದ್ದರು. ಹಲವು ಯಕ್ಷಗಾನ ಪ್ರಸಂಗಗಳು ಕಂಠಸ್ಥವಾಗಿದ್ದವು. ಪ್ರಸಂಗಕರ್ತರಾಗಿಯೂ ಖ್ಯಾತರಾಗಿದ್ದರು. ಯಕ್ಷಗಾನ ಹಾಡುಗಳ ಕೃತಿಕಾರನಾಗಿ ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು.
ಮುಗ್ಧಮನಸ್ಸಿನ ಬಲಿಪರು ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ, ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ.