Site icon Suddi Belthangady

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ‘ಮಂದಾರ’ ಪ್ರಾಯೋಗಿಕ ಪತ್ರಿಕೆ ಅನಾವರಣ

ಧರ್ಮಸ್ಥಳ: ಉಜಿರೆಯ ಎಸ್‌ಡಿಎಂ ಕಾಲೇಜಿನ ಬಿಬಿಎ ಮತ್ತು ಬಿಎ ವಿದ್ಯಾರ್ಥಿಗಳು ಆರಂಭಿಸಿರುವ ‘ಮಂದಾರ’ ಪ್ರಾಯೋಗಿಕ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರು, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಇತ್ತೀಚೆಗೆ ಶ್ರೀಕ್ಷೇತ್ರದಲ್ಲಿ ಅನಾವರಣಗೊಳಿಸಿದರು.

ಬಳಿಕ ಪತ್ರಿಕೆಯ ಉದ್ದೇಶ, ರೂಪುರೇಷಗಳ ಬಗ್ಗೆ ಮಾಹಿತಿ ಪಡೆದು, ಶುಭಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆಯ ಎಸ್‌ಡಿಎಂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ ಹೆಗಡೆ, ಎ.ಆರ್.ರಕ್ಷಿತ್ ರೈ, ಪ್ರಧಾನ ಸಂಪಾದಕ ಚಂದನ ಭಟ್ ಕೋಣೆಮನೆ, ವ್ಯವಸ್ಥಾಪಕ ಸಂಪಾದಕ ಎಂ.ಎಸ್.ಶೋಭಿತ್ ಉಪಸ್ಥಿತರಿದ್ದರು.

‘ಮಂದಾರ’ ಸಂಪೂರ್ಣ ವರ್ಣಮಯ ಪುಟಗಳನ್ನು ಮತ್ತು ವಿಶೇಷ ವಿನ್ಯಾಸ ಹೊಂದಿರುವ ಪತ್ರಿಕೆಯಾಗಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮಾರ್ಗದರ್ಶನದಲ್ಲಿ ಹಾಗೂ ಬ್ಯುಸಿನೆಸ್‌ ಅಡ್ಮಿನಿಷ್ಟ್ರೇಷನ್‌ ವಿಭಾಗದ ಸಹಕಾರದಲ್ಲಿ ಪ್ರಕಟಗೊಳ್ಳಲಿದೆ. ಸಾಹಿತ್ಯ, ಪರಿಸರ, ವಿಜ್ಞಾನ, ಪ್ರವಾಸ, ವಾಣಿಜ್ಯ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ಮತ್ತು ಹೆಸರಾಂತ ಲೇಖಕರು ಬರೆದ ಲೇಖನಗಳು ಪ್ರಕಟಗೊಳ್ಳುತ್ತದೆ. ಮುದ್ರಣ ಮತ್ತು ಡಿಜಿಟಲ್ ಎರಡೂ ಆವೃತ್ತಿಯನ್ನು ಈ ಪತ್ರಿಕೆ ಹೊಂದಿದೆ.

Exit mobile version