Site icon Suddi Belthangady

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಶಿಷ್ಯೋಪನಯನ

ಉಜಿರೆ: ಹಿತ-ಮಿತವಾದ ಶುದ್ಧ ಸಸ್ಯಾಹಾರ ಸೇವನೆಯೊಂದಿಗೆ ಯೋಗಾಭ್ಯಾಸ ನಮ್ಮ ದೈನಂದಿನ ಜೀವನ ಶೈಲಿಯಾದಾಗ ಆರೋಗ್ಯಭಾಗ್ಯ ರಕ್ಷಣೆ ಸಾಧ್ಯವಾಗುತ್ತದೆ ಎಂದು ವಿಯೆನ್ನಾದ ಶ್ರೀ  ದೀಪ್ ಮಾಧವಾನಂದ ಆಶ್ರಮದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮೀ ಮಹೇಶ್ವರಾನಂದಜಿ ಹೇಳಿದರು.


ಅವರು ಫೆ.6 ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ  ಪ್ರವೇಶ ಪಡೆದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಮಾರಂಭದಲ್ಲಿ ಆಶೀವರ್ಚನ ನೀಡಿದರು.
ವಿಶ್ವದ ಸಕಲ ಜೀವರಾಶಿಗಳಲ್ಲಿ ಮನುಷ್ಯಜನ್ಮ ಶ್ರೇಷ್ಠವಾಗಿದ್ದು ಮದ್ಯ, ಮಾಂಸ, ಮಧು ತ್ಯಾಗ ಮಾಡಿ, ತಾಯಿ ಮತ್ತು ಭೂಮಿ ತಾಯಿಗೆ ವಿಶೇಷ ಗೌರವ, ಮಾನ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ನಿತ್ಯವೂ ಯೋಗಾಭ್ಯಾಸದಿಂದ ನಾವು ಪರಿಪೂರ್ಣ ಮನುಷ್ಯರಾಗಿ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕ್ರೊನೇಶಿಯಾದ ಅಗ್ನಿದೇವಿ ಮತ್ತು ಸ್ವಾಮಿ ಅವತಾರ ಗುರೂಜಿ ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ ವಿಶ್ವದೆಲ್ಲೆಡೆ ಇಂದು ಯೋಗಾಭ್ಯಾಸ ಜನಪ್ರಿಯವಾಗುತ್ತಿದ್ದು ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಲು ಯೋಗಾಭ್ಯಾಸ ಅನಿವಾರ್ಯವಾಗಿದೆ. ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗದ ಮಹತ್ವ ಪ್ರಚಾರ ಮತ್ತು ಪ್ರಸಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೆಂಗಳೂರು, ಧರ್ಮಸ್ಥಳ ಮತ್ತು ಪರೀಕಾದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ದೇಶದಲ್ಲೆ ಪ್ರಥಮವಾಗಿ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯ-ಸವಲತ್ತುಗಳ ಸದುಪಯೋಗ ಮಾಡಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ. ಗೀತಾ ಶೆಟ್ಟಿ ಧನ್ಯವಾದವಿತ್ತರು. ಡಾ. ಜೋಸ್ನಾ ಮತ್ತು ಡಾ. ಅನಿಕಾ ಕಾರ್ಯಕ್ರಮ ನಿರ್ವಹಿಸಿದರು. 

Exit mobile version