Site icon Suddi Belthangady

ಅಖಿಲ ಭಾರತ ಜಾದೂ ಸಮ್ಮೇಳನಕ್ಕೆ ಬೆಳ್ತಂಗಡಿಯ ರಾಜೀವ್ ಬಿ.ಹೆಚ್ ಹಾಗೂ ಮನೋಜ್

ಬೆಳ್ತಂಗಡಿ: ತೀರ್ಥಹಳ್ಳಿಯ ಮಲೆನಾಡು ಮ್ಯಾಜಿಕ್ ಸರ್ಕಲ್ ನ ವತಿಯಿಂದ ಫೆ. 12 ಮತ್ತು 13 ರಂದು ನಡೆಯುವ ಅಖಿಲ ಭಾರತ ಜಾದೂ ಸಮ್ಮೇಳನದಲ್ಲಿ ಬೆಳ್ತಂಗಡಿ ಸ್ಪೂರ್ತಿ ಯಕ್ಷಿಣಿ ಲೋಕದ ಖ್ಯಾತ ಜಾದುಗಾರರಾದ ರಾಜೀವ್ ಬಿ. ಎಚ್. ಮತ್ತು ಮನೋಜ್ ರವರು ಭಾಗವಹಿಸಲಿದ್ದಾರೆ.

ತೀರ್ಥಹಳ್ಳಿಯ ಶಾಂತವೇರಿ ರಂಗಮಂದಿರದಲ್ಲಿ ನಡೆಯಲಿರುವ ಅಖಿಲ ಭಾರತ ಜಾದು ಸಮ್ಮೇಳನದಲ್ಲಿ ಸಾಂಪ್ರದಾಯಿಕ ಕೇರಳದ ವಿಶೇಷ ಜಾದು ಇಂದ್ರಜಾಲ ಕಾಳರಿ ಪಾಯಟ್ಟು ಜಾದು, ಚೆನ್ನೈ, ಮದ್ರಾಸ್, ಆಂಧ್ರ ಹಾಗೂ ದಕ್ಷಿಣ ಕನ್ನಡದ ಜಾದುಗಾರರಿಂದ ಹಾರರ್ ಮತ್ತು ಕಾಮಿಡಿ ಜಾದು ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟರಾದ ರಮೇಶ್ ಅರವಿಂದ್, ಖ್ಯಾತ ಚಲನಚಿತ್ರ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ,. ಬೆಳ್ತಂಗಡಿಯ ಸ್ಫೂರ್ತಿ ಯಕ್ಷಿಣಿ ಲೋಕದ ಬಹುಮುಖ ಪ್ರತಿಭೆಯ ಚಲನಚಿತ್ರ, ಧಾರಾವಾಹಿ ಕಲಾವಿದ ಲೇಖಕ ರಾಜೀವ್ ಬಿ.ಹೆಚ್ .ರವರು ಈಗಾಗಲೇ ದೇಶದ ಪ್ರತಿಷ್ಠಿತ ಜಾದೂ ಸಂಘಟನೆಗಳು ಸಂಘಟಿಸಿದ ಜಾದು ಸಮ್ಮೇಳನದಲ್ಲಿ ಭಾಗವಹಿಸಿ ಪ್ರದರ್ಶನಗಳನ್ನು ನೀಡಿರುತ್ತಾರೆ. ರಾಜೀವ್ ಬಿ.ಹೆಚ್. ಹಾಗೂ ಖ್ಯಾತ ಜಾದುಗಾರ ಕುದ್ರೋಳಿ ಗಣೇಶ್ ರವರ ಶಿಷ್ಯರಾದ ಮನೋಜ್ ರವರಿಗೂ ಈ ಸಮ್ಮೇಳನಕ್ಕೆ ಕರೆ ಬಂದಿದ್ದು ಭಾಗವಹಿಸಲಿದ್ದಾರೆ,.

ಬಾಲ್ಯದಲ್ಲಿ ಜಾದೂ ವಿದ್ಯೆಯಲ್ಲಿ ಪರಿಣತೆಯನ್ನು ಹೊಂದಿರುವ ಮನೋಜ್ ರವರು ಕೇರಳದಲ್ಲಿ ನಡೆದ ಜಾದೂ ಸಮ್ಮೇಳನದ ಜಾದೂ ಸ್ಪರ್ಧೆಯಲ್ಲಿ ಕರಾಟೆ ಜಾದು ಎಂಬ ತನ್ನ ವಿಶೇಷ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿದ್ದ “ಶನಿ” ಧಾರಾವಾಹಿಯಲ್ಲಿ, ಚಲನಚಿತ್ರ ಹಾಗೂ ಧಾರಾವಾಹಿಗಳ ನಿರ್ದೇಶನ ಮಾಡಿರುತ್ತಾರೆ. ತೀರ್ಥಹಳ್ಳಿಯಲ್ಲಿ ನಡೆಯುವ ಈ ಜಾದು ಸಮ್ಮೇಳನದಲ್ಲಿ ದೇಶದ ಸುಮಾರು 400ಕ್ಕೂ ಮಿಕ್ಕಿದ ಜಾದುಗಾರರು ಭಾಗವಹಿಸಲಿದ್ದು ಖ್ಯಾತ ಜಾದುಗಾರರಿಂದ ಪ್ರದರ್ಶನ ಹಾಗೂ ತರಬೇತಿ ನಡೆಯಲಿದೆ.

Exit mobile version