ನೆರಿಯ: ಶಿಸ್ತುಬದ್ಧ ಜೀವನ ಶೈಲಿ, ಉತ್ತಮ ಆಹಾರ, ದುಶ್ಚಟಮುಕ್ತ ಜೀವನ ಹಾಗೂ ಕಾಲ ಕಾಲಕ್ಕೆ ಸರಿಯಾಗಿ ವೈದ್ಯರಿಂದ ಸೂಕ್ತ ತಪಾಸಣೆ ನಡೆಸಿದಾಗ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಶಿವಪದ್ಮಣ್ಣ ನುಡಿದರು.
ಅವರು ಫೆ.4 ರಂದು ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ ಇದರ ಆರ್ಥಿಕ ನೆರವಿನೊಂದಿಗೆ ಗಂಡಿಬಾಗಿಲು ಸಂತ ತೋಮಸ್ ಪ್ರೌಢಶಾಲೆಯಲ್ಲಿ ನಡೆದ ‘ವಿಶ್ವ ಕ್ಯಾನ್ಸರ್ ದಿನಾಚರಣಾ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ಪರ್ಶ ಕಾರ್ಯಕ್ರಮದ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಮೂಲಕ ನಡೆಸಲ್ಪಡುವ ಸ್ಪರ್ಶ- ಕ್ಯಾನ್ಸರ್ ರೋಗದ ವಿರುದ್ಧ ನಡೆಸುವ ಅಭಿಯಾನದ ಬಗ್ಗೆ ವಿವರಿಸಿದರು. ಸಂತ ತೋಮಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತ್ರೇಸಿಯಾ ಕೆ.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಶ್ರೀಮತಿ ಸರೋಜ ಕ್ಯಾನ್ಸರ್ ಜಾಗೃತಿಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಜೋನ್ಸನ್ ರವರು ಕಾರ್ಯಕ್ರಮ ನಿರೂಪಿಸಿದರು.
ಸುಮಾರು 120 ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಕೇರಳ ಪಿಲತ್ತರದ ಸಂತ ಜೋಸೆಫ್ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರಗಳನ್ನು ವಿತರಿಸಲಾಯಿತು.