Site icon Suddi Belthangady

ಧರ್ಮಸ್ಥಳ: ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ 

ಉಜಿರೆ: ಸ್ವಾಧ್ಯಾಯದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಕೇವಲಜ್ಞಾನದ ಮೂಲಕ ಮೋಕ್ಷ ಸಾಧನೆ ಮಾಡಬಹುದು ಎಂದು ಪೂಜ್ಯ ಸುಖಸಾಗರ ಮುನಿಮಹಾರಾಜರು ಹೇಳಿದರು.

ಅವರು ಧರ್ಮಸ್ಥಳದ ರತ್ನಗಿರಿಯಲ್ಲಿ ಫೆ.3 ರಂದು ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ಸಂದರ್ಭ ಮಂಗಲ ಪ್ರವಚನ ನೀಡಿದರು. ಶ್ರಾವಕರು ದೇವರು, ಗುರುಗಳು ಹಾಗೂ ಶಾಸ್ತ್ರದ ಅಧ್ಯಯನ ಮೊದಲಾದ ಷಟ್ಕರ್ಮಗಳನ್ನು ನಿತ್ಯವೂ ಮಾಡಬೇಕು ಎಂದು ಅವರು ಹೇಳಿದರು.

 ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಭಯ-ಭಕ್ತಿ ಇದ್ದಲ್ಲಿ ಮನುಷ್ಯ ತನ್ನನ್ನು ತಾನೇ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುನಿ ಪರಂಪರೆ ಇರುವ ವರೆಗೆ ಧರ್ಮ ಇರುತ್ತದೆ. ಧರ್ಮದ ಮರ್ಮವನ್ನರಿತು ನಿತ್ಯವೂ ಧರ್ಮದ ಅನುಷ್ಠಾನ ಮಾಡಿದಾಗ ಜೀವನ ಪಾವನವಾಗುತ್ತದೆ. ಗೃಹಾಲಯ, ಜಿನಾಲಯ ಮತ್ತು ದೇವಾಲಯಗಳು ನಮ್ಮನ್ನು ಉದ್ಧರಿಸುವ ಕೇಂದ್ರಗಳಾಗಿವೆ. ನಿತ್ಯವೂ ಎಲ್ಲರೂ ದೇವರ ದರ್ಶನ ಮಾಡಿ, ಸ್ವಾಧ್ಯಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

 ಬೆಳಿಗ್ಗೆ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಮಂಗಲ ದ್ರವ್ಯಗಳೊಂದಿಗೆ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಿತು.

 ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ ಹೆಗ್ಗಡೆಯವರು, ಡಿ. ರಾಜೇಂದ್ರ ಕುಮಾರ್, ಡಾ. ನೀತಾ ರಾಜೇಂದ್ರ ಕುಮಾರ್ ಪೂಜೆಯಲ್ಲಿ ಭಾಗವಹಿಸಿದರು. ಪಂಚನಮಸ್ಕಾರ ಮಂತ್ರಪಠಣ, ಜಿನಭಜನೆ, ಭಕ್ತಿಗೀತೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

Exit mobile version