Site icon Suddi Belthangady

ಪಜಿರಡ್ಕ ಬ್ರಹ್ಮಕಲಶೋತ್ಸವದಲ್ಲಿ ಮಾತೃ ಸಂಗಮ ಕಾರ್ಯಕ್ರಮ

ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಫೆ.2 ರಂದು ಮಾತೃ ಸಂಗಮ ಕಾರ್ಯಕ್ರಮ ನೆರವೇರಿತು.
ಸಾಹಿತಿ, ಆಧ್ಯಾತ್ಮಿಕ ಚಿಂತಕಿ ಡಾ.ವೀಣಾ ಬನ್ನಂಜೆ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ “ಹೆಣ್ಣಿನಲ್ಲಿ ಆರ್ದ್ರತೆ, ಭಕ್ತಿ, ಸಮರ್ಪಣೆಯ ಭಾವವಿದೆ. ಪ್ರಕೃತಿಯಂತೆ ಎಲ್ಲವನ್ನು ಸ್ವೀಕರಿಸುವ ಹೆಣ್ಣು ತ್ಯಾಗಮಯಿ. ಹೆಣ್ಣಿನ ಭಕ್ತಿ ಹಾಗೂ ಶಕ್ತಿಗೆ ವಿಶೇಷ ಮಹತ್ವವಿದೆ. ಧರ್ಮದ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿದರೆ ನಮ್ಮ ಸಂಸ್ಕೃತಿ ಪರಂಪರೆಗೆ ಅರ್ಥ ಬರುತ್ತದೆ. ಅಂತರಾತ್ಮ ಶುದ್ಧವಿದ್ದರೆ ಧರ್ಮ ಕ್ಷೇತ್ರ ಎಂದಿಗೂ ಕುರುಕ್ಷೇತ್ರವಾಗದು. ದೇವರೆದುರು ಶುದ್ಧವಾಗಿದ್ದು ಹೊರಗೆ ಲಂಪಟನ ತೋರಿದರೆ ಅದು ಅಧರ್ಮವಾಗುತ್ತದೆ. ಅಂತರಂಗದ ಧರ್ಮ ವನ್ನು ಪಾಲಿಸಿದರೆ ಅದೇ ನಮಗೆ ಶಕ್ತಿ ಹಾಗೂ ದಾರಿ ದೀಪ”ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಹಿರಿಯ ಮಹಿಳೆ ಜಾನಕಿ ರಾಮಯ್ಯ ಗೌಡ ಗುಲ್ಲೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ರವಿ, ಕಲ್ಮಂಜ ಗ್ರಾಪಂ ಉಪಾಧ್ಯಕ್ಷೆ ವಿಮಲಾ ಹಾಗೂ ನಳಿನಾಕ್ಷಿ ಹೊಳ್ಳ ಉಪಸ್ಥಿತರಿದ್ದರು.
ಮಹಿಳಾ ಸಮಿತಿಯ ಸಂಚಾಲಕಿ ಚಿತ್ರಾ ಭಿಡೆ ಸ್ವಾಗತಿಸಿದರು. ಉಪನ್ಯಾಸಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ,ಲಲಿತಾ ಸಹಸ್ರನಾಮ ಪಠಣ, ಭಜನೆ,ಮೊದಲಾದ ಕಾರ್ಯಕ್ರಮಗಳು ಜರಗಿದವು.
ಮುಂಡಾಜೆ, ಚಾರ್ಮಾಡಿ, ಮಿತ್ತಬಾಗಿಲು, ಕಡಿರುದ್ಯಾವರ ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಿತು .

Exit mobile version