ಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಜ.29 ರಂದು ನಡೆಯಿತು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ರಘೋತ್ತಮ ಆಚಾರ್ಯ ಶಂಖನಾದ ಮಾಡಿ ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭೆ ಪ್ರಾರಂಭವಾಯಿತು. ವೇ.ಮೂ. ಕಂಠೀರವ ನವಾತೆ ಮತ್ತು ಪುರುಷೋತ್ತಮ ಮರಾಠೆ ವೇದ ಮಂತ್ರ ಪಠಣ ಮಾಡಿದರು.
ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಮಾತನಾಡುತ್ತಾ ಭಾರತ ದೇಶ ಜಾತ್ಯತೀತ ಹೆಸರಿನಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಎಲ್ಲಿದೆ ಸಮಾನತೆ ? ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆಯೋಗಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಹಿಂದುಗಳಿಗೆ ಏನಾದರೂ ಆಯೋಗ ಇದೆಯಾ? ಎಂದು ಪ್ರಶ್ನಿಸಿದರು. ಧರ್ಮಾಧಿಷ್ಠಿತ ಸಮಾಜ ಸ್ಥಾಪನೆ ಯಾಗಲು ಭಾರತ ಹಿಂದೂ ರಾಷ್ಟ್ರವಾಗಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕ ಶ ವಿಜಯ ಕುಮಾರ್ ಮಾತನಾಡುತ್ತಾ ಹಿಂದೂಗಳು ಹಿಂದೂ ಧರ್ಮದ ಆಚರಣೆ ಮಾಡದೇ ಇರುವುದರಿಂದ ಇವತ್ತು ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದಿಗೆ ಗುರಿಯಾಗುತ್ತಿದ್ದಾರೆ ಎಂದರು.
. ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಜಿಲ್ಲಾ ಸಮಿತಿ ಸಮನ್ವಯಕಾರದ ಸೌ. ಪವಿತ್ರ ಕುಡ್ವ ಮಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ಹರೀಶ್ ಮುದ್ದಿನಡ್ಕ ಮತ್ತು ಕು. ದಿವ್ಯಾ ಕಾರ್ಯಕ್ರಮ ನಿರೂಪಣೆ ಮಾಡಿದರು .
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸಮಿತಿಯ ಶಶಿಧರ ಮಾಕಳ, ದಾಮೋದರ, ಸನಾತನ ಸಂಸ್ಥೆಯ ಆನಂದ ಗೌಡ, ಹಾಗೂ ಧರ್ಮ ಪ್ರೇಮಿ ವಸಂತ ಉಜಿರೆ, ಧರ್ಮಸ್ಥಳ ಜಮಾ ಉಗ್ರಾಣ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ ಇವರು ಉಪಸ್ಥಿತರಿದ್ದರು.