ಬೆಳ್ತಂಗಡಿ: ಮಹಾತ್ಮಾ ಗಾಂಧೀಜಿಯವರು ಸಾರಿದ ಅಹಿಂಸಾ ತತ್ವ, ಸತ್ಯ, ತನ್ನನ್ನೇ ತಾನು ಒಡ್ಡಿಕೊಂಡು ನಡೆಸಿದ ಉಪವಾಸ ಸತ್ಯಾಗ್ರಹದಂತಹಾ ಚಳವಳಿಯ ನಡೆ, ಧರ್ಮ ಧರ್ಮಗಳ ಮಧ್ಯೆ ಸಹಿಷ್ಣುತೆಯ ಸಂದೇಶ ಅಂತಹ ನೆಲೆಗಟ್ಟಿನ ಭಾರತ ಮತ್ತೆ ಉದಯಿಸಬೇಕು. ಆಗ ಮಾತ್ರ ಅವರ ಜೀವನ ಸಂದೇಶ ಮರುಸ್ಥಾಪನೆಯಾಗುತ್ತದೆ ಎಂದು ನವೋದಯ ವಸತಿ ಶಾಲೆ ಮುಂಡಾಜೆಯ ಪ್ರಾಂಶುಪಾಲ ಮುರಳೀಧರ ಅಭಿಪ್ರಾಯಪಟ್ಟರು.
ಗಾಂಧಿವಿಚಾರ ವೇದಿಕೆ ಬೆಳ್ತಂಗಡಿ, ಸೌಹಾರ್ದ ವೇದಿಕೆ ಬೆಳ್ತಂಗಡಿಯ ಮುಂಡಾಜೆ ಘಟಕ ಹಾಗೂ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಜಂಟಿ ಸಹಭಾಗಿತ್ವದಲ್ಲಿ ಜ.30 ರಂದು, ಗಾಂಧಿ ಹುತಾತ್ಮ ದಿನದ ಅಂಗವಾಗಿ ಮುಂಡಾಜೆ ಭಿಡೆ ತಿರುವು ರಸ್ತೆ ಬದಿಯ ಗಾಂಧಿ ಕಟ್ಟೆಯಲ್ಲಿ ನಡೆದ ‘ಗಾಂಧಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು. ಅರೆಕ್ಕಲ್ ರಾಮಚಂದ್ರ ಭಟ್ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ದೀಪ ಬೆಳಗಿದರು.
ಬಳಿಕ ಸರ್ವರಿಂದ ಪುಷ್ಪಾರ್ಚನೆ ನಡೆಯಿತು. ಕಾರ್ಯಕ್ರಮ ಸಂಯೋಜಕ ಲ. ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಬು ಪೂಜಾರಿ ಕೂಳೂರು, ಕಿಶೋರ್ ಕುಮಾರ್ ಕುರುಡ್ಯ, ಅಬ್ದುಲ್ ಹಮೀದ್ ನೆಕ್ಕರೆ, ಜಿ.ಕೆ ಹಮೀದ್, ವಾಮದೇವ ಆಠವಳೆ, ರಾಮ ಆಚಾರಿ, ಬಾಬು ನಾಯ್ಕ ಒಂಜರೆಬೈಲು, ನಾಗಪ್ರಸಾದ, ಗಾಂಧಿ ಸ್ಮಾರಕ ಆಲದ ಮರ ಇರುವ ಜಾಗದ ಮಾಲಿಕರ ಮನೆಯವರಾದ ಶೈಲಾ ರವೀಂದ್ರ ಮರಾಠೆ, ಆಸಿಫ್ ಕುರುಡ್ಯ, ನವಾಝ್ ಕುರುಡ್ಯ, ಇಬ್ರಾಹಿಂ ಕಕ್ಕಿಂಜೆ, ಬಿಜು, ಉಮೇಶ್ ಪೂಜಾರಿ ನೆಕ್ಕರೆ, ರಮೇಶ್ ನಾಯ್ಕ ಮೊದಲಾದವರು ಸಕ್ರಿಯವಾಗಿ ಭಾಗಿಯಾದರು.
ಗಾಂಧಿವಿಚಾರ ವೇದಿಕೆ ತಾಲೂಕು ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿದರು.