Site icon Suddi Belthangady

ಬೆಳ್ತಂಗಡಿ: ಅಕ್ರಮ ಆಸ್ತಿ ಸಂಪಾದನೆ, ಅರಣ್ಯಾಧಿಕಾರಿಗೆ ರೂ.1.50 ಕೋಟಿ ದಂಡ, 5 ವರ್ಷ ಜೈಲು ಶಿಕ್ಷೆ

ಬೆಳ್ತಂಗಡಿ: ಮಂಗಳೂರು ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಮಂಗಳೂರು ದೇರೆಬೈಲು ನಿವಾಸಿ ಎಸ್‌.ರಾಘವ ಪಾಟಾಳಿಯವರು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಮಂಗಳೂರು ಲೋಕಾಯುಕ್ತ ಕಛೇರಿಗೆ ಮೂಲಗಳಿಂದ ಮಾಹಿತಿ ಬಂದಿದ್ದು, ಅದರಂತೆ ಅವರ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 21-07-2011 ರಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ, ಅವರು ಜ.27 ರಂದು ಅಂತಿಮ ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಭಾರಿ ಮೊತ್ತದ ದಂಡ ಹಾಗೂ ಜೈಲು ಶಿಕ್ಷೆಯನ್ನು ನೀಡಿ ಮಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದೆ.

ತೀರ್ಪಿನಲ್ಲಿ ಆರೋಪಿ ರಾಘವ ಪಾಟಾಳಿ ಅವರ ವಿರುದ್ಧ ಕಲಂ 13(1)(ಇ) ಜೊತೆಗೆ 13(2) ಭ್ರಷ್ಟಾಚಾರ ತಡೆ ಕಾಯ್ದೆ 1988 ರಂತೆ 5 ವರ್ಷಗಳ ಸಾದಾ ಸಜೆ ಹಾಗೂ ರೂ.1.50 ಕೋಟಿ ದಂಡ ವಿಧಿಸಿದ್ದು. ಆರೋಪಿಯು ದಂಡ ಕಟ್ಟಲು ವಿಫಲರಾದಲ್ಲಿ ಮತ್ತೆ 11 ವರ್ಷಗಳ ಕಾಲ ಸಾದಾ ಸಜೆ ಶಿಕ್ಷೆಯನ್ನು ಆದೇಶಿಸಿ, 295 ಪುಟಗಳ ಸುಧೀರ್ಘ ಅಂತಿಮ ತೀರ್ಪು ನೀಡಿದ್ದಾರೆ.

ಪೊಲೀಸ್ ನಿರೀಕ್ಷಕ ಉದಯ ಎಂ.ನಾಯ‌ಕ್ ದೂರು ದಾಖಲಿಸಿದ್ದರು. ಪೊಲೀಸ್‌ ಉಪಧೀಕ್ಷಕ ವಿಠಲ್ ದಾಸ್ ಪೈ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

Exit mobile version