ಪತ್ರಿಕಾಗೋಷ್ಠಿ
ಬೆಳ್ತಂಗಡಿ : ದ.ಕ.ಜಿಲ್ಲಾ 25ನೇ ರಜತ ಸಂಭ್ರಮದ ಕನ್ನಡ ಸಾಹಿತ್ಯ ಸಮ್ಮೇಳನ ಉಜಿರೆಯಲ್ಲಿ ಕುಂಬ್ಳೆ ಸುಂದರ ರಾವ್, ಪ್ರಾಂಗಣ, ಶ್ರೀಕೃಷ್ಣಾನುಗ್ರಹ ಸಭಾಂಗಣದಲ್ಲಿ, ಸಾರಾ ಅಬೂಬಕರ್ ವೇದಿಕೆಯಲ್ಲಿ ಫೆ.03, 04, 05 ರಂದು ಜರಗಲಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮತ್ತು ಸಮ್ಮೇಳನದ ಸಂಯೋಜನಾ ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಹೇಳಿದರು. ಅವರು ಜ.27 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸಮ್ಮೇಳನವು ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆಯವರ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ. ಇದು ಜಿಲ್ಲೆಯಲ್ಲಿ ನಡೆಯುತ್ತಿರುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಗಿರುವುದರಿಂದ ಬೆಳ್ಳಿ ಹಬ್ಬದ ಸಂಭ್ರಮದ ಮೆರುಗು ಈ ಸಮ್ಮೇಳನಕ್ಕಿದೆ.
ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿಯವರು ರಾಷ್ಟ್ರ ಧ್ವಜಾರೋಹಣ ಮಾಡುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ಸಮ್ಮೇಳನಾಧ್ಯಕ್ಷರನ್ನು ದೇವಸ್ಥಾನದ ಮಹಾದ್ವಾರದಿಂದ ಸಮ್ಮೇಳನದ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಬೆಳ್ತಂಗಡಿ ತಹಶೀಲ್ದಾರ ಪೃಥ್ವಿ ಸಾನಿಕಂ ಮತ್ತು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಸಮ್ಮೇಳನದ ಮತ್ತು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಉದ್ಘಾಟನೆ, ವಿಶೇಷ ಸನ್ಮಾನ
ಸಂಜೆ 5.00 ಗಂಟೆಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರು ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರವರು ಸಮ್ಮೇಳನ ಸಂಚಿಕೆ ಅನಾವರಣ ಮಾಡಲಿದ್ದಾರೆ. ಶಾಸಕ ಹರೀಶ ಪೂಂಜ ರವರು ಪ್ರದರ್ಶನ ಮಳಿಗೆ, ಜಿಲ್ಲಾಧಿಕಾರಿ ಆರ್. ರವಿಕುಮಾರ್ ರವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ. ಪ್ರಧಾನ ಭಾಗವಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ ರಘುನಾಥ ಸೋಮಯಾಜಿ, ಕಾಸರಗೋಡು ಕಸಾ ಪ ಜಿಲ್ಲಾಧ್ಯಕ್ಷ ಎಸ್.ಎ ಭಟ್, ಸಮ್ಮೇಳನ ನಿಕಟಪೂರ್ವ ಅಧ್ಯಕ್ಷ ಡಾ. ಎಂ ಪ್ರಭಾಕರ ಜೋಷಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾಮಾಜಿನ ಸೇವೆಗಾಗಿ ಡಾಕ್ಟರೇಟ್ ಪದವಿ ಪುರಸ್ಕೃತರಿಗೆ ವಿಶೇಷ ಅಭಿನಂದನೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಡಿ.ಹರ್ಷೇಂದ್ರ ಕುಮಾರ್, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ನಡೆಸಿಕೊಡಲಿದ್ದಾರೆ, ನಂತರ ರಾಜ್ಯದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.4 ರಂದು ಉದಯರಾಗದೊಂದಿಗೆ ಎರಡನೇ ದಿನದ ಸಮ್ಮೇಳನ ಆರಂಭವಾಗುತ್ತದೆ.
ಗೋಷ್ಠಿಗಳು, ಭಾಗವಹಿಸುವ ಕವಿ-ಸಾಹಿತಿಗಳು
ದೈವಾರಾಧನೆ ಮತ್ತು ತುಳುನಾಡು, ಜಿಲ್ಲೆಯ ಸಾಹಿತ್ಯ ಪರಂಪರೆ, ಅಗಲಿದ ಗಣ್ಯರಿಗೆ ನುಡಿನಮನ ಮಾಧ್ಯಮ – ಸವಾಲುಗಳು, ನೂತನ ಪುಸ್ತಕಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ, ಪರಿಸರ ಮತ್ತು – ಜೀವ ಸಂಕುಲಗಳು, ಆತ್ಮ ನಿರ್ಭರ, ಕವಿಗೋಷ್ಠಿ, ರಂಗವೈಖರಿ, ಮಂಕುತಿಮ್ಮನ ಕಗ್ಗ – ಜೀವನ ಮೌಲ್ಯಗಳು ಮೊದಲಾದ ವಿಶಿಷ್ಟ ಗೋಷ್ಟಿಗಳು ಮತ್ತು ಉಪನ್ಯಾಸಗಳನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿದೆ.
ಈ ಎಲ್ಲಾ ಗೋಷ್ಠಿಗಳಿಗೆ ಜಿಲ್ಲೆಯ ಖ್ಯಾತ ವಿದ್ವಾಂಸರು, ಕವಿ ಸಾಹಿತಿಗಳು, ತಜ್ಞರುಗಳಾದ ಪೇಜಾವರ, ಪ್ರೊ. ಎ. ವಿ ನಾವಡ, ತಾರಾನಾಥ ವರ್ಕಾಡಿ, ಅರವಿಂದ ಚೊಕ್ಕಾಡಿ, ಡಾ. ಬಿ ಪಿ ಸಂಪತ್ ಕುಮಾರ್, ಜಯಾನಂದ ಸಂಪಾಜೆ, ದೇವಿಪ್ರಸಾದ್ ಜೈ ಕನ್ನಡಮ್ಮ, ಎ ಕೆ ಕುಕ್ಕಿಲ, ಸಿನಾನ್ ಇಂದಬೆಟ್ಟು ರಾಕೇಶ್ ಕುಮಾರ್ ಕಮ್ಮಾಜೆ, ಡಾ. ಮೋಹನ್ ಆಳ್ವ ಮೂಡಬಿದ್ರೆ, ಡಾ. ಪ್ರಭಾಕರ ಶಿಶಿಲ, ಶ್ರೀಪತಿ ಭಟ್ ಮೂಡಬಿದ್ರೆ. ಭುವನಾಭಿರಾಮ ಉಡುಪ ಕಿನ್ನಿಗೋಳಿ, ಡಾ. ಎಲ್ ಎಚ್ ಮಂಜುನಾಥ್, ಡಾ. ಜಗದೀಶ್ ಬಾಳ, ರಾಮಕೃಷ್ಣ ಆಚಾರ್ ಮೂಡಬಿದ್ರೆ, ಮೋನಪ್ಪ ಕರ್ಕೆರ ಪುತ್ತೂರು, ಕೆ ಎನ್ ಜನಾರ್ದನ್, ಗಿರಿಧರ ಕಲ್ಲಾಪು, ವಿವೇಕ್ ವಿನ್ಸೆಂಟ್ ಪಾಯಸ್, ಡಾ. ವಸಂತ ಕುಮಾರ್ ಪೆರ್ಲ, ಜೀವನ್ ರಾಂ ಸುಳ್ಯ, ಸುನಿಲ್ ಪಲ್ಲಮಜಲು, ಶೀನಾ ನಾಡೋಳಿ, ಜಿ. ಎಸ್. ನಟೇಶ್ ಶಿವಮೊಗ್ಗ ಇವರೆಲ್ಲರು ಆಗಮಿಸಿ ಸಮ್ಮೇಳನದ ವಿವಿಧ ಗೋಷ್ಠಿ, ಉಪನ್ಯಾಸಗಳನ್ನು ನಿರ್ವಹಿಸಲಿದ್ದಾರೆ.
ವಿಶೇಷವಾಗಿ ಸಮ್ಮೇಳನಾಧ್ಯಕ್ಷರೊಂದಿಗೆ ವಿವಿಧ ವಿಷಯಗಳ ತಜ್ಞರುಗಳು ಸಂವಾದ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಬಹಿರಂಗ ಅಧಿವೇಶನ ಮತ್ತು ಮಸೂದೆ ಮಂಡನೆ ಕಾರ್ಯಕ್ರಮ ನಡೆಯಲಿದ್ದು ತದನಂತರ ಡಿ ವೀರೆಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಭ ಜರುಗಲಿದೆ.
ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಉಡುಪಿ ಕ ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಉಪಸ್ಥಿತರಿರುತ್ತಾರೆ. ಸಮಾರೋಪ ಭಾಷಣಕಾರರಾಗಿ ಡಾ. ತಾಳ್ತಜೆ ವಸಂತ ಕುಮಾರ್ ರವರು ಆಗಮಿಸಲಿದ್ದಾರೆ, ಸಮಾರೋಪದಲ್ಲಿ ವಿಶೇಷ ಸಾಧಕ ಸನ್ಮಾನವು ನೆರವೇರಲಿದ್ದು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ ಎಸ್ ರವರು ಸನ್ಮಾನಿಸಲಿದ್ದಾರೆ.
ಸಾಧಕ ಸನ್ಮಾನ, ಪುಸ್ತಕ ಬಿಡುಗಡೆ
ಒಟ್ಟಾಗಿ ವಿಶೇಷ ಉಪನ್ಯಾಸಗಳು ಮೂರು, ನಾಲ್ಕು ಗೋಷ್ಠಿಗಳು ಆಯೋಜನೆಗೊಂಡಿದೆ. ಮೂರು ವಿಭಾಗದಲ್ಲಿ 39 ಮಂದಿಗೆ ಗೌರವಾರ್ಪಣೆ ನಡೆಯಲಿದ್ದು, 21 ಮಂದಿ ಕವಿಗಳು ಪಾಲ್ಗೊಳುವ ಕವಿಗೋಷ್ಠಿ ನಡೆಯುತ್ತದೆ. 16 ನೂತನ ಪುಸ್ತಕಗಳು ಬಿಡುಗಡೆಯಾಗಲಿರುವ ವಿಶೇಷ ಸಮಾರಂಭ ಆಯೋಜನೆಗೊಂಡಿದೆ. ಉದ್ಘಾಟನೆಯಿಂದ ಸಮಾರೋಪದವರೆಗೆ 17 ಕಲಾತಂಡದವರಿಂದ ವೈವಿಧ್ಯಮಯ ಕಲಾ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಜಿಲ್ಲೆಯ ಸಂಸದರು. ಎಲ್ಲಾ ಶಾಸಕರು, ಉನ್ನತ ಅಧಿಕಾರಿಗಳು ಉಜಿರೆ ಪಂಚಾಯತ್ತಿನ ಅಧ್ಯಕ್ಷರು, ಸರ್ವ ಸದಸ್ಯರು ವಿಶೇಷ ಆಹ್ವಾನಿತರಾಗಿ ಸಮ್ಮೇಳನದ ಯಶಸ್ಸಿನಲ್ಲಿ ಭಾಗಿಗಳಾಗಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡೆಟ್ನಾಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ತಾಲೂಕು ಕಸಾಪ ದ ಅಧ್ಯಕ್ಷ ಡಿ. ಯದುಪತಿ ಗೌಡ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಉಪಸ್ಟಿತರಿದ್ದರು.