Site icon Suddi Belthangady

ಶಿಬಾಜೆಯ ದಲಿತ ಯುವಕ ಶ್ರೀಧರ್ ಸಾವಿನ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಡಿ.ಎಸ್.ಎಸ್‌ನಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ. ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿಯ ಶಿಬಾಜೆ ಗ್ರಾಮದಲ್ಲಿ ದಲಿತ ಯುವಕ ಶ್ರೀಧರ್ ಅವರ ಅಮಾನುಷ ಕೊಲೆಯನ್ನು ಖಂಡಿಸಿ, ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ, ಶಿಬಾಜೆ ಗ್ರಾಮ ಮತ್ತು ರಾಜ್ಯಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹಿಸಿ ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಪ್ರತಿಭಟಣೆಯು ಜ.23 ರಂದು ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಮೂಲಕ ನಡೆಯಿತು.

ಮುಖ್ಯ ಭಾಷಣಕಾರರಾಗಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಮಾತನಾಡಿ, ದಲಿತ ಮೇಲೆ ದೌರ್ಜನ್ಯ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದಲ್ಲಿ ಇದು ನಡೆಯುತ್ತಿದೆ. ಜನ ಸ್ನೇಹಿಯಾಗಬೇಕಾಗಿದ್ದ ಪೊಲೀಸರು, ದಲಿತರ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ನಾವು ಮೌನವಾಗಿರಬಾರದು ಪ್ರತಿಭಟನೆ, ಚಳವಳಿ ಮೂಲಕ ಸಿಂಹ ಘರ್ಜನೆ ಮಾಡಬೇಕು, ಶ್ರೀಧರ ಅವರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಸರಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ, ರಾಜ್ಯ ಮೋಗೇರ ಸಂಗದ ನಿಕಟ ಪೂರ್ವ ಅಧ್ಯಕ್ಷ ಸುಂದರ ಮೇರ ಮಾತನಾಡಿ, ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ನೇಮಿರಾಜ ಕಿಲ್ಲೂರು, ಶೇಖರ ಕುಕ್ಕೇಡಿ, ರಮೇಶ್. ಆರ್, ತಾಲೂಕು ಮೋಗೇರ ಸಂಘದ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ಸೇಸಪ್ಪ ಬೆದ್ರಕಾಡು, ಆನಂದ ಮಂಗಳೂರು, ವಸಂತ ಕುಬಲಾಡಿ, ಮೋನಪ್ಪ ಚಿಕ್ಕಮಗಳೂರು, ಪ್ರಭಾಕರ ನಲ್ಕೆ, ಗಿರೀಶ್ ಉಳ್ಳಾಲ, ಮೋನಪ್ಪ ಮೂಡಿಗೆರೆ, ಶೇಖರ್. ಎಲ್, ಬೇಬಿ ಸುವರ್ಣ, ಲೋಕೇಶ್ ಪಡುಬಿದ್ರೆ, ರವಿ ಮೂಡಿಗೆರೆ ಹಾಗೂ ಡಿಎಸ್‌ಎಸ್ ತಾಲೂಕಿನ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ, ಕಾರ್ಮಿಕ ಮುಖಂಡ ಬಿ.ಎಂ ಭಟ್, ಎಲ್. ಮಂಜುನಾಥ್ ಆಗಮಿಸಿ ಬೆಂಬಲ ಸೂಚಿಸಿದರು. ಪ್ರತಿಭಟನೆಗೆ ಮೊದಲು ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

Exit mobile version