ಬಂಗಾಡಿ: ಬೆಳ್ತಂಗಡಿ ತಾಲೂಕಿನ ಬಂಗಾಡಿಯಲ್ಲಿ ಬ್ರಹ್ಮಶ್ರೀ ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಶ್ರೀ ವರದರಾಜ ವಾಸುಕೀವನ ಬಂಟ್ವಾಳ ಇವರ ಉಪಸ್ಥಿತಿಯಲ್ಲಿ ಸ್ಥಾಪಿತಗೊಂಡಿರುವ ಸಹಸ್ರ ನಾಗಬನದ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾಬ್ರಹ್ಮಕಲಶಾಭಿಷೇಕ, ಮಹಾಗಣಪತಿ ದೇವರ ಅಷ್ಟಬಂಧ ಪವಿತ್ರ ಬ್ರಹ್ಮಕಲಶೋತ್ಸವ, ಹಾಗೂ ನಾಗಮಂಡಲೋತ್ಸವ ಕಾರ್ಯಕ್ರಮಗಳು ಜ. 23 ರಿಂದ ಜ. 27 ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಡಾ| ಪ್ರದೀಪ್ ಎ. ತಿಳಿಸಿದರು.
ಅವರು ಜ.21 ರಂದು ಶ್ರೀ ಅಷ್ಟಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜ.23ರಂದು ಬೆಳಿಗ್ಗೆ ದೇವಾಲಯ ವ್ಯಾಪ್ತಿಯ ಗ್ರಾಮಸ್ಥರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಋತ್ವಿಜರಿಗೆ ಸ್ವಾಗತ, ದೇವತಾ ಪ್ರಾರ್ಥನೆ, ವಾಸ್ತುಹೋಮ ಮೊದಲಾದ ಕಾರ್ಯಕ್ರಮಗಳು ಸಂಜೆ ನಡೆಯಲಿದೆ. ಬೆಳಗ್ಗೆ ಪಾಕಶಾಲೆ, ಉಗ್ರಾಣ, ಕಾರ್ಯಾಲಯ ಉದ್ಘಾಟನೆ, ಹಸಿರುವಾಣಿ ಹೊರೆಕಾಣಿಕೆ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಜ.24 ರಂದು ಗಣಪತಿ ಹೋಮ, ಸರ್ಪತ್ರಯ ಮಂತ್ರಹೋಮ ಜರುಗಲಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಅತಿಥಿಗಳಾಗಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು, ಯಶೋಧರ ಬಲ್ಲಾಳ್ ಬಂಗಾಡಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಹಾಗೂ ವಿವಿಧ ಗಣ್ಯರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಬಂಗಾಡಿ ಅರಮನೆಯ ಶತಾಯುಷಿ ರವಿರಾಜ್ ಬಲ್ಲಾಳ್ ಇವರ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜ.25 ರಂದು ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಧನಂಜಯ ಅಜ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜ.26 ರಂದು ಬೆಳಿಗ್ಗೆ ನಾಗಬ್ರಹ್ಮ ದೇವರ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನಡೆಯಲಿದೆ. ಸಂಜೆ ಉಡುಪಿ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ರಾಮಚಂದ್ರ ಕುಂಜಿತ್ತಾಯರು ನಾಗಪಾತ್ರಿಗಳು ಮತ್ತು ಕೃಷ್ಣ ಪ್ರಸಾದ ಮುದ್ದೂರು ವೈದ್ಯ ಬಳಗದವರಿಂದ ನಾಗಮಂಡಲ ವೈಭವೋತ್ಸವ ಸಹಸ್ರರು ಭಕ್ತರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗಣಪತಿ ದೇವರ ಗುಡಿಯಲ್ಲಿ ಬ್ರಹ್ಮ ಕಲಾಧಿವಾಸ ಹಾಗೂ ದೇವರ ಮೂಡಪ್ಪ ಸೇವೆ ಜರುಗಲಿದೆ ಎಂದು ಹೇಳಿದರು.
ಜ.27 ರಂದು ದೇವರ ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಗೌರವ ಅಧ್ಯಕ್ಷ ಬಿ.ಯಶೋಧರ ಬಲ್ಲಾಳ್, ಶ್ರೀ ಅಷ್ಟಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವಾಲಯದ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಧರ್ಮಸ್ಥಳ, ವಿ.ಹಿಂ.ಪ ಬೆಳ್ತಂಗಡಿ ಅಧ್ಯಕ್ಷರು ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಕೆ, ಟ್ರಸ್ಟಿ ವೆಂಕಪ್ಪ ಮೂಲ್ಯ, ಚಂದ್ರಶೇಖರ್ ಗೌಡ, ಶ್ರೀಧರ್ ಗುಡಿಗಾರ್, ಪ್ರಚಾರ ಸಮಿತಿಯ ರತ್ನಾಕರ ಬಿ. ನಾವೂರು ಉಪಸ್ಥಿತರಿದ್ದರು.