Site icon Suddi Belthangady

ಪೆರಿಂಜೆ: ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ

ವೇಣೂರು: ಚರ್ಮಗಂಟು ರೋಗ ಪೀಡಿತ ಹಸುವಿನ ಹಾಲಿನ ಸೇವನೆಯಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ ಎಂದು ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪಶು ವಿಜ್ಞಾನಿ ಡಾ| ಶಿವಕುಮಾರ್ ಆರ್. ಹೇಳಿದರು.
ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಬೀದರ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಸಹಯೋಗದೊಂದಿಗೆ ಪೆರಿಂಜೆಯ ಸಂತೃಪ್ತಿ ಸಭಾಭವನದಲ್ಲಿ ಜ.20 ರಂದು ಜರಗಿದ ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ಮತ್ತು ಪಶು ಸಂಗೋಪನೆಯ ಮಾಹಿತಿ ಕಾರ್ಯಾಗಾರ-ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಚರ್ಮಗಂಟು ರೋಗ ವೈರಸ್‌ನಿಂದ ಹರಡುವ ರೋಗವಾಗಿದ್ದು, ನಿರ್ದಿಷ್ಠವಾದ ಔಷಧಿ ಇಲ್ಲ. ಮುಂಜಾಗೃತ ಕ್ರಮವಾಗಿ ಚುಚ್ಚುಮದ್ದು ನೀಡುವುದರಿಂದ ಶೇ. 90ರಷ್ಟು ರೋಗ ಹರಡುವುದನ್ನು ತಡೆಯಬಹುದಾಗಿದೆ ಎಂದರು. ರೈತರು ನಷ್ಟವನ್ನು ತಡೆಯಲು ಹಸುಗಳಿಗೆ ವಿಮೆಯನ್ನು ಮಾಡುವಂತೆ ಅವರು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರು ಅಧ್ಯಕ್ಷತೆ ವಹಿಸಿ, ಕೃಷಿ, ರೈತರಿಗೆ ಧೈರ್ಯ ಮತ್ತು ಮಾಹಿತಿ ನೀಡುವ ಕಾರ್ಯವನ್ನು ಸಂಘವು ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಕೃಷಿಕರ ಏಳಿಗೆಗೆ ಶ್ರಮಿಸುತ್ತಿದೆ ಎಂದರು. ತೋಟಗಾರಿಕೆ ವಿಜ್ಞಾನಿ ಡಾ| ರಶ್ಮಿ ಆರ್. ಸುಧಾರಿತ ಅಡಿಕೆ ಬೇಸಾಯದ ಕ್ರಮಗಳ ಬಗ್ಗೆ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ| ಕೇದರಾನಾಥ್ ಅಡಿಕೆ ಬೆಳೆಯ ರೋಗ ಮತ್ತು ನಿಯಂತ್ರಣ ಕ್ರಮಗಳು, ವಿಜ್ಞಾನಿ ಡಾ| ಮಲ್ಲಿಕಾರ್ಜುನ ಎಲ್. ಅವರು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಹೊಸಂಗಡಿ ಗ್ರಾ.ಪಂನ ಪಿಡಿಒ ಗಣೇಶ್ ಶೆಟ್ಟಿ, ಪೆರಿಂಜೆ ಹಾಲು ಉ.ಸ. ಸಂಘದ ಅಧ್ಯಕ್ಷ ಪಿ.ಸುಧಾಕರ ಪೂಜಾರಿ, ಪೆರಾಡಿ ಪ್ರಾ.ಕೃ.ಸ. ಸಂಘದ ನಿರ್ದೇಶಕ ಪ್ರವೀಣ್ ಪಿಂಟೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ಉಪಸ್ಥಿತರಿದ್ದರು. ಪೆರಾಡಿ ಪ್ರಾ.ಕೃ.ಸ. ಸಂಘದ ನಿರ್ದೇಶಕ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ನಿರ್ದೇಶಕ ಹರಿಪ್ರಸಾದ್ ಪಿ. ನಿರೂಪಿಸಿದರು.

Exit mobile version