Site icon Suddi Belthangady

ಜ.31 -ಫೆ.6 : ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಕಲ್ಮಂಜ :ಇಲ್ಲಿಯ ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ.31 ರಿಂದ ಫೆ.6 ರ ವರೆಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಗೌರವ ಅಧ್ಯಕ್ಷತೆಯಲ್ಲಿ ಯು. ವಿಜಯ ರಾಘವ ಪಡುವೆಟ್ನಾಯರ ಮಾರ್ಗದರ್ಶನದಲ್ಲಿ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತುಕಾರಾಮ ಸಾಲಿಯಾನ್ ಅರ್ಲ ಹೇಳಿದರು. ಅವರು ಜ.18 ರಂದು ದೇವಸ್ಥಾನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.


ಐದು ಗ್ರಾಮಗಳಿಗೆ ಸಂಬಂಧಪಟ್ಟ ಪಂಚ ಮಾಗಣೆಯ ಈ ದೇವಸ್ಥಾನ ಪವಿತ್ರ ಕ್ಷೇತ್ರವಾಗಿದ್ದು 1980 ರಲ್ಲಿ ನಡೆದಿದ್ದ ಬ್ರಹ್ಮ ಕಲಶೋತ್ಸವ ಇತಿಹಾಸ ಸೃಷ್ಟಿಯಾಗಿತ್ತು ಬಳಿಕ ಜೀರ್ಣೋದ್ಧಾರಗೊಂಡು 2009 ರಲ್ಲಿ ಬ್ರಹ್ಮಕಲಶ ನಡೆದು 2021 ರಲ್ಲಿ ನಡೆಯಬೇಕಿದ್ದ ಬ್ರಹ್ಮಕಲಶ ಕೊರೋನ ಮಹಾಮಾರಿಯಿಂದ ಈ ವರ್ಷ ನಡೆಯಲಿದೆ. ಈ ವರ್ಷ ಸಣ್ಣ ಪುಟ್ಟ ಜೀರ್ಣೋದ್ಧಾರ ಕಾರ್ಯದೊಂದಿಗೆ ನಂದಿ ಮಂಟಪಕ್ಕೆ ಹೊಸ ಮರ ಹಾಕಿ ತಾಮ್ರದ ಹೊದಿಕೆ, ಗಣಪತಿ ದೇವರ ಗುಡಿ, ದುರ್ಗಾಪರಮೇಶ್ವರಿ ದೇವಿಯ ಶಿಲಾ ಮೂರ್ತಿ, ಸುಬ್ರಹ್ಮಣ್ಯ ದೇವರ ಗುಡಿ ಕೆಲಸ ನಡೆಯುತ್ತಿದ್ದು, ನಾಗ ಪ್ರತಿಷ್ಠೆ ಮಾಡಲಾಗಿದೆ. ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸೇವಾ ಕಾರ್ಯಕ್ಕೆ ಬರುವವರಿಗೆ ಸುಮಾರು 50 ಲಕ್ಷ ವೆಚ್ಚದಲ್ಲಿ ಯಾತ್ರಾ ನಿವಾಸ ಕಾಮಗಾರಿ ನಡೆಯುತ್ತಿದೆ, ಸರಕಾರದಿಂದ ಮಂಜೂರಾದ ರೂ.50 ಲಕ್ಷ ವೆಚ್ಚದಲ್ಲಿ ನೂತನ ಅನ್ನ ಛತ್ರ, ಸಭಾ ಭವನ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ.
ಬ್ರಹ್ಮಕಲಶೋತ್ಸವದ ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರ ಸಹಕಾರದಲ್ಲಿ ಸಂಪರ್ಕ ರಸ್ತೆ ಆಗುತ್ತಿದೆ.
ಏಳು ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಣ್ಯರು, ಜನಪ್ರತಿನಿಧಿಗಳು, ಭಾಗವಹಿಸಲಿದ್ದು ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ನಿಡಿಗಲ್, ಕೋಶಾಧಿಕಾರಿ ಪಾಂಡುರಂಗ ಕಾಕತ್ ಕರ್, ಉಪಾಧ್ಯಕ್ಷ ರವಿ ಕುಮಾರ್ ಭಟ್, ಸದಸ್ಯರಾದ ವೆಂಕಟ್ರಮಣ ಶೆಟ್ಟಿ, ಶಶಿಧರ ಎಂ. ನಿಡಿಗಲ್ ಉಪಸ್ಥಿತರಿದ್ದರು.

Exit mobile version