Site icon Suddi Belthangady

ಸೌತಡ್ಕ: ಜ.23-25: ಭಜನೋತ್ಸವ, ಯಕ್ಷೋತ್ಸವ, ಮೂಡಪ್ಪಸೇವೆ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾದ ‘ಯಾತ್ರಿ’ ನಿವಾಸ ಲೋಕಾರ್ಪಣೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.23 ರಿಂದ ಜ.25 ರವರೆಗೆ ಭಜನೋತ್ಸವ, ಯಕ್ಷೋತ್ಸವ, ಮೂಡಪ್ಪಸೇವೆ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಣಗೊಂಡ ಯಾತ್ರಿ ನಿವಾಸ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿದೆ. ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ದಯಾನಂದ ಹೆಗ್ಡೆ ರವರು ಸೌತಡ್ಕದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ದೇವಳದಲ್ಲಿ ಜ.23 ರಂದು ಭಜನೋತ್ಸವದಿಂದ ಮೊದಲ್ಗೊಂಡು ಜ.24 ರಂದು ಯಕ್ಷೋತ್ಸವ, ಜ.೨೫ ರಂದು ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಹೋಮ ಹಾಗೂ ಸಂಜೆ ವಿಜೃಂಭಣೆಯಿಂದ ಮೂಡಪ್ಪ ಸೇವೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ.
ಜ.23 ರಂದು ಬೆಳಗ್ಗೆ 8.30ಕ್ಕೆ ಶ್ರೀ ದೇವಳದಲ್ಲಿ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖಾ ವತಿಯಿಂದ ದೇವಳಕ್ಕೆ ಸಂಬಂಧಿಸಿದ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಯಾತ್ರಿ ನಿವಾಸವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿರುವರು. ಶಾಸಕರ ಅನುದಾನದಿಂದ ಬಿಡುಗಡೆಯಾದ ಸೋಲಾರ್ ಹೈಮಾಸ್ಕ್ ಲೈಟನ್ನು ಈ ದಿನವೇ ಉದ್ಘಾಟಿಸಲಿರುವರು.
ಭಕ್ತಾದಿಗಳಿಗೆ ಅನುಕೂಲ ಕ್ಲಪಿಸುವ ಹಿತದೃಷ್ಟಿಯಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ಸಾಗಲು ಅನುಕೂಲವಾಗುವಂತೆ ರೂ.3 ಲಕ್ಷ ವೆಚ್ಚದಲ್ಲಿ ಸ್ಟೀಲ್ ರೈಲಿಂಗ್ಸ್ ಅಳವಡಿಕೆ ಕಾಮಗಾರಿ, ಹಾಗೂ ರೂ.24 ಲಕ್ಷ ವೆಚ್ಚದ ರಂಗಮಂದಿರ ಮುಂಭಾಗ ಶೀಟ್ ಅಳವಡಿಸಿ ಸಭಾಂಗಣ ನಿರ್ಮಾಣ ಕಾಮಗಾರಿಕೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು ಜಾತ್ರಾ ಮಹೋತ್ಸವ ಮುಗಿದ ಬಳಿಕ ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ.


ಈ ಹಿಂದೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ದೇವಳದ ಉತ್ತರ ಭಾಗದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಶ್ರೀ ನಾಗ ದೇವರಿಗೆ ಕಟ್ಟೆ, ರಕ್ತೇಶ್ವರಿ ಗುಡಿ, ಹಾಗೂ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಅಂದಾಜುಪಟ್ಟಿಗೆ ಇಲಾಖಾ ಪೂರ್ವಾನುಮತಿ ದೊರಕ್ಕಿದ್ದು ಇಲಾಖಾ ನಿಯಮಾನುಸಾರ ಈ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳಲಿದ್ದೇವೆ ಹಾಗೂ ದೇವಳಕ್ಕೆ ಸಂಬಂಧಿಸಿದ ಕಡೀರ ನಾಗಬನ ಅಭಿವೃದ್ಧಿಗೊಳಿಸುವ ಪ್ರಯತ್ನವನ್ನೂ ಸಹಿತ ನಡೆಸಲಾಗುತ್ತಿದೆ.
ಅಲ್ಲದೆ ಮುಂದಿನ ವಾರ್ಷಿಕ ಆಯವ್ಯಯವನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಸಾಲಿನಲ್ಲಿ ಸುಸಜ್ಜಿತ ದಾಸ್ತಾನು ಕೊಠಡಿಯನ್ನೊಳಗೊಂಡ ಪ್ರಸಾದ ತಯಾರಿ ಕಟ್ಟಡ, ಅನ್ನಛತ್ರದ ಮೇಲಂತಸ್ತನ್ನು ವಿಸ್ತರಣೆಗೊಳಿಸುವ ಯೋಜನೆಯಿದೆ.
ದೇವಳದ ವತಿಯಿಂದ ನಡೆಸಲ್ಪಡುವ ಗೋಶಾಲೆಯಲ್ಲಿ 230 ಗೋವುಗಳನ್ನು ಪೋಷಿಸಲಾಗುತ್ತಿದ್ದು ಗೋಶಾಲೆಗೆ ತಗಲುವ ವೆಚ್ಚವನ್ನು ದೇವಳದ ವತಿಯಿಂದಲೇ ಭರಿಸಲಾಗುತ್ತಿದೆ. ಗೋಶಾಲೆ ಬಳಿ ಜಿಲ್ಲಾ ಪಂಚಾಯತ್ ವತಿಯಿಂದ ರೂ.19 ಲಕ್ಷ ವೆಚ್ಚದಲ್ಲಿ ಗೋಬರ್ ಧನ್ ಘಟಕವನ್ನು ಸ್ಥಾಪಿಸಲು ಈಗಾಗಲೇ ಮಂಜೂರಾತಿ ದೊರಕಿದ್ದು ಕಾಮಗಾರಿ ಶೀಘ್ರವೇ ಪ್ರಾರಂಭಗೊಳ್ಳಲಿದೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆ ಅಥವಾ ಸರಕಾರದಿಂದ ಅನುದಾನ ದೊರೆತಲ್ಲಿ ಗೋಶಾಲೆ ಕಟ್ಟಡ ಅಭಿವೃದ್ಧಿ, ಮೇವು ಅಭಿವೃದ್ಧಿಯಂತಹ ಕೆಲಸಗಳನ್ನು ಮಾಡಬಹುದಾಗಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ದೇವಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖಾ ವತಿಯಿಂದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದು ಈ ಬಗ್ಗೆ ಇಲಾಖಾ ಮಂಜೂರಾತಿ ದೊರೆಯುವ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ತಿಳಿದಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಸುಮಾರು 5 ರಿಂದ 10 ಸಾವಿರ ಭಕ್ತರು ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ ‘ದೈವ ಸಂಕಲ್ಪ ಯೋಜನೆ’ಯಡಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮೂಡಪ್ಪ ಸೇವಾ ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಸಂಚಾಲಕ ಕುಶಾಲಪ್ಪ ಗೌಡ ಪೂವಾಜೆ, ಸಹಸಂಚಾಲಕ ಬಾಲಕೃಷ್ಣ ನೈಮಿಷ, ಸ್ವಾಗತ ಸಮಿತಿ ಸಂಚಾಲಕ ಯೋಗೀಶ ಆಲಂಬಿಲ, ಆಹಾರ ಸಮಿತಿಯ ಸಂಚಾಲಕ ವಿನಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರಂದರ ಕೆ ಕಡೀರ, ಪ್ರಶಾಂತ್ ಪಿ, ವಿಠಲ ಕೆ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಣಂದ ಹೆಗ್ಡೆ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಪುರಂದರ ಕೆ. ಧನ್ಯವಾದವಿತ್ತರು.

Exit mobile version