Site icon Suddi Belthangady

ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ವ್ಯಕ್ತಿತ್ವ ವಿಕಾಸನ ಮತ್ತು ಪರೀಕ್ಷೆ ಸಿದ್ದತಾ ಕಾರ್ಯಾಗಾರ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಇನ್ಫೋಮೆಟ್ ಫೌಂಡೇಶನ್ ರಿ. ಮಂಗಳೂರು ಇವರಿಂದ, ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಸಿದ್ಧತೆ ವಿಷಯದಲ್ಲಿ ತರಬೇತು ಕಾರ್ಯಾಗಾರ ಜರಗಿತು.

ತರಬೇತುದಾರರಾಗಿ ಆಗಮಿಸಿದ ಮಂಗಳೂರಿನಲ್ಲಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು, ಆಪ್ತ ಸಲಹೆಗಾರರೂ ಆಗಿರುವ ಅಬ್ದುಲ್ ಖಾದರ್ ಮತ್ತು ಬೆಂಗಳೂರಿನ ಐಟಿ ಉದ್ಯೋಗಿ ಮಹಮ್ಮದ್ ತೌಸಿಫ್ ರವರು ತರಬೇತಿಯನ್ನು ನಡೆಸಿಕೊಟ್ಟರು.

ತರಬೇತುದಾರ ಮಹಮ್ಮದ್ ತೌಸಿಫ್ ರವರು ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ , ದುಡಿಮೆ ಯಶಸ್ಸಿನ ಮೂಲಮಂತ್ರ. ವಿದ್ಯಾರ್ಥಿಗಳು ಕನಸು ಕಾಣಬೇಕು, ನನಸಾಗುವಂತೆ ಯೋಜನಾಬದ್ಧವಾಗಿ ಪರಿಶ್ರಮಪಡಬೇಕು. ಜೊತೆಗೆ ಸಕಾರಾತ್ಮಕ ಮನೋಭಾವ, ಸ್ವೀಕಾರಶೀಲ ಸ್ವಭಾವ, ದುರಾಭ್ಯಾಸ ರಹಿತ ಜೀವನದ ಸಂಕಲ್ಪವಿರುವವರು ಯಶಸ್ವೀ ಸಾಧಕರಾಗಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಗುರಿ ನಿರ್ಧಾರ, ಆತ್ಮವಿಶ್ವಾಸ, ಅಧ್ಯಯನ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಅತಿಥಿಗಳಾಗಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿ ಮಹಮ್ಮದ್ ಶರೀಫ್ ರವರು ಉಪಸ್ಥಿತರಿದ್ದರು.

ಹಳೆವಿದ್ಯಾರ್ಥಿ ಸಂಘದ ಸಂಚಾಲಕ ಉಮೇಶ್ ಮಂಜೊತ್ತುರವರು ವಂದಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ವಾರಿಜ ಎಸ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕ ಸಿಬ್ಬಂದಿಯವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Exit mobile version