Site icon Suddi Belthangady

ಸಾಹಿತಿ ಸಾರ ಅಬೂಬಕ್ಕರ್ ರವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ

ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗಲಿದ ಖ್ಯಾತ ಸಾಹಿತಿ ಶ್ರೀಮತಿ ಸಾರಾ ಅಬೂಬಕ್ಕರ್ ರವರಿಗೆ, ಉಜಿರೆಯಲ್ಲಿ 25 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಾಲಯದ ಶಾರದಾ ಮಂಟಪದಲ್ಲಿ, ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು.

ಮೊದಲಿಗೆ ಅಗಲಿದ ಚೇತನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಿ, ಸಾರಾ ರವರ ಭಾವಚಿತ್ರಕ್ಕೆ ಸೇರಿದವರೆಲ್ಲರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ನುಡಿನಮನದಲ್ಲಿ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ.ಶ್ರೀನಾಥ್ ಮಾತನಾಡುತ್ತಾ, ಸಾರಾರವರು ಸಮಚಿತ್ತದ ಸಾಹಿತಿ. ಸವಾಲುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ನಿರಂತರವಾಗಿ ಬರವಣಿಗೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡವರು. ತನ್ನ ಕೃತಿಗಳ ಮೂಲಕ ಸಮಕಾಲೀನ ಸಮಾಜದೊಂದಿಗೆ ಬದುಕಿದವರು. ಮಾನವತಾವಾದಿಯಾಗಿ, ಸ್ವತಃ ಆದರ್ಶ ರೀತಿಯಲ್ಲಿ ಬದುಕಿ ಸಾಧಿಸಿ ತೋರಿದವರು ಎಂದು ಅಭಿಪ್ರಾಯಪಟ್ಟರು.

ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ನುಡಿನಮನದಲ್ಲಿ ಶ್ರೀಮತಿ ಸಾರಾ ಅಬೂಬಕ್ಕರ್ ರವರ ವ್ಯಕ್ತಿತ್ವ ವಿಶೇಷತೆಗಳನ್ನು ನೆನಪಿಸಿಕೊಳ್ಳುತ್ತಾ, ಅವರು ತನ್ನ ಸಮುದಾಯದ ಬಗೆಗಿನ ಒಳನೋಟಗಳನ್ನು ಬರಹದ ಮೂಲಕ ಪ್ರಕಟಗೊಳಿಸಿದವರು. ಪ್ರತಿರೋಧಗಳಿಗೆ ಉತ್ತರ ನೀಡದೆ, ತನ್ನ ಕಾರ್ಯವನ್ನು ಮಾಡುವುದರಲ್ಲೆ ಉತ್ತರ ನೀಡಿದ ಧೀರತೆಯನ್ನು ಹೊಂದಿದ್ದರು ಎಂದು ಹೇಳಿದರು.

ಸಭೆಯಲ್ಲಿ ಉಜಿರೆ ಮೋಹನ್ ಶೆಟ್ಟಿಗಾರ್, ಕೆ ರಾಮಚಂದ್ರ ಶೆಟ್ಟಿ, ಕೇಶವ ಭಟ್ ಅತ್ತಾಜೆ, ಗಣಪ್ಪಯ್ಯ ಬಿ , ಡಾ. ದಿವ ಕೊಕ್ಕಡ, ಡಾ. ರಾಜೇಶ್ ಬಿ, ಸುಭಾಷ್ ರಾವ್ ಬೋಳಾರ್, ಡಾ. ಭಾಸ್ಕರ ಹೆಗಡೆ, ಸುನಿಲ್ ಪಂಡಿತ್, ರಮೇಶ್ ಮಯ್ಯ ಉಜಿರೆ, ಹರ್ಷಕುಮಾರ್ ಕೆ ಎನ್ , ನಿವೃತ್ತ ಸೇನಾನಿ ಜಗನ್ನಾಥ ಶೆಟ್ಟಿ, ಶ್ರೀಮತಿ ಸುಭಾಷಿಣಿ, ಶ್ರೀಮತಿ ಗಂಗಾರಾಣಿ ಜೋಶಿ, ರವಿಚಂದ್ರ ಬಿ, ಎಸ್ ಜಿ ಭಟ್ ಉಜಿರೆ, ಡಾ. ನಾಗಣ್ಣ ಡಿ ಎ, ಮಂಜು ಆರ್ , ಯತೀಶ್ ಬಳಂಜ, ಅರುಣಾ ಶ್ರೀನಿವಾಸ್, ಶ್ರೀರಾಮ ಎನ್ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲುರವರು ಕಾರ್ಯಕ್ರಮ ನಿರೂಪಿಸಿದರು.
ಶ್ರದ್ಧಾಂಜಲಿ ಸಭೆಯ ನಂತರ ಫೆ. 03 , 04 ಮತ್ತು 05 ರಂದು ಉಜಿರೆಯಲ್ಲಿ ಜರಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ಸಂಚಾಲಕರ ಸಭೆ ಜರಗಿತು.

Exit mobile version