Site icon Suddi Belthangady

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಜನ ಸಹಭಾಗಿತ್ವದಲ್ಲಿ 7ನೇ ವರ್ಷದ ಮಕರ ಸಂಕ್ರಾಂತಿ ಪ್ರಯುಕ್ತ ರಾಜ್ಯಾದ್ಯಂತ 16,239 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗವಾಗಿದ್ದು. ಇವುಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಪರಿಸರ ಸ್ವಚ್ಛತಾ ಮನೋಭಾವವು ಸಾರ್ವತ್ರಿಕವಾಗಿರುತ್ತದೆ ಎಂಬ ಶ್ರೀ ಕ್ಷೇತ್ರ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು ವರ್ಷದಲ್ಲಿ 2 ಬಾರಿ ಅಂದರೆ ಆಗಸ್ಟ್ 15 ಮತ್ತು ಜನವರಿ 14ರ ಸಂದರ್ಭ ಸಪ್ತಾಹದ ಮೂಲಕ ಸ್ವಯಂ ಸೇವಕರು ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುತ್ತಾರೆ.


ಕಳೆದ 7 ವರ್ಷಗಳಿಂದ ನಿರಂತರವಾಗಿ ಸ್ವಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಮಕರ ಸಂಕ್ರಾತಿ ಜ. 14 ರ ಮೊದಲು ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳು ಸ್ವಚ್ಛ ಹಾಗೂ ಪಾವಿತ್ರ್ಯತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಜ. 7 ರಿಂದ 13 ರವರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ನಡೆಸಲಾಗುತ್ತಿದೆ.

ರಾಜ್ಯದಾದ್ಯಂತ 16239 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು ಸುಮಾರು 4,07,043 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮಪಂಚಾಯತ್‌ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.

Exit mobile version