ವೇಣೂರು : ಇತ್ತೀಚೆಗೆ ಅಡಿಕೆ ತೋಟಗಳಿಗೆ ತಗಲುತ್ತಿರುವ ಅಡಿಕೆ ಎಲೆಚುಕ್ಕೆ ರೋಗವು ಒಂದು ಫಂಗಸ್‌ನಿಂದ ಹರಡುವ ರೋಗವಾಗಿದ್ದು, ಅಡಿಕೆ ಮರದ ಬುಡಕ್ಕೆ ರಾಸಾಯನಿಕ ಅಥವಾ ಗೊಬ್ಬರ ಹಾಕುವುದರಿಂದ ಇದರ ತಡ್ಡೆಗಟ್ಟಲು ಅಥವಾ ನಿವಾರಿಸಲು ಸಾಧ್ಯವಿಲ್ಲ. ಸರಕಾರದಿಂದ ಅನುಮೋದನೆ ಪಡೆದ ಪ್ರೊಪಿಕೊನೊಜೊಲ್ ಎಂಬ ಔಷಧಿಯನ್ನು ಒಂದು ಲೀ. ನೀರಿಗೆ ಒಂದು ಎಂಎಲ್‌ನಷ್ಟು ಬೆರೆಸಿ ಸಿಂಪಡಿಸುವುದರಿಂದ ತಡೆಗಟ್ಟಬಹುದು ಎಂದು ಬೆಳ್ತಂಗಡಿ ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕ ಮಹಾವೀರ ಶೇಬಣ್ಣ ಮಾಹಿತಿ ನೀಡಿದರು.
ವೇಣೂರು ಯಾತ್ರಿ ನಿವಾಸದಲ್ಲಿ ನಡೆದ ಜೈನ್ ಮಿಲನ್‌ನ ಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಈ ಮಾಹಿತಿ ನೀಡಿ, ಈಗಾಗಲೇ ಇಲಾಖೆ, ಕೃಷಿ ವಿಜ್ಞಾನಕೇಂದ್ರ, ವಿವಿಧ ಸಂಘಸಂಸ್ಥೆಗಳು, ಸಹಕಾರಿ ಸಂಘಗಳು ಹಾಗೂ ಗ್ರಾಮ ಪಂಚಾಯತುಗಳ ಸಹಯೋಗದಲ್ಲಿ ರೈತರಿಗೆ ರೋಗದ ಬಗ್ಗೆ ಅರಿವು ಮೂಡಿಸಿ ತಾಂತ್ರಿಕ ಸಲಹೆ, ಮಾಹಿತಿ, ಔಷಧಿ ಸಿಂಪಡಣೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಜೈನ್ ಮಿಲನ್ ಅಧ್ಯಕ್ಷ ಸುಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಭೀಮ್‌ರಾಯ್ ಸೊಡ್ಡಗಿ, ಸಭೆಯ ಅತಿಥೇಯರಾದ ಉದಯ ಕುಮಾರ್ ಶೆಟ್ಟಿ, ಇಂದಿರಾಶೋಭಾಕರ್, ಹೇಮಲತಾ ಧರಣೇಂದ್ರ ಉಪಸ್ಥಿತರಿದ್ದರು.
ಋತ್ವಿ ಪ್ರಾರ್ಥಿಸಿ, ಸನ್ನಿಧಿ ಮಿಥುನ್ ಸ್ವಾಗತಿಸಿದರು. ಮಿಲನ್ ಕಾರ್ಯದರ್ಶಿ ಬಿ. ನಿರ್ಮಲ್ ಕುಮಾರ್ ವರದಿ ವಾಚಿಸಿದರು. ಮಿಲನ್ ಮಾಜಿ ಕಾರ್ಯದರ್ಶಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ಪವನ್ ಜೈನ್ ಪೆರ್ಮಾಣು ವಂದಿಸಿದರು.