Site icon Suddi Belthangady

ಬೆಳ್ತಂಗಡಿ : ಕುದುರೆಯೊಂದಿಗೆ ಜಾಗಿಂಗ್ ಹೋಗುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಕುದುರೆ ಸ್ಥಳದಲ್ಲೇ ಸಾವು, ಯುವಕ ಗಂಭೀರ


ಬೆಳ್ತಂಗಡಿ : ಪ್ರತಿ ನಿತ್ಯ ಬೆಳಿಗ್ಗೆ ರೈಡಿಂಗ್ ಹೋಗುವ ಕುದುರೆಯೊಂದಕ್ಕೆ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ್ದು ಸವಾರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪೆದಮಲೆ ಎಂಬಲ್ಲಿ ಡಿ. 25 ರಂದು ನಡೆದಿದೆ.

ಉದ್ಯಮಿ ಪಿಲಿಗೂಡು ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಇವರ ಪುತ್ರ ಬೆಳಗ್ಗಿನ ಹೊತ್ತು ಕುದುರೆಯಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕುದುರೆಯೊಂದಿಗೆ ಜಾಗಿಂಗ್ ಹೋಗುತ್ತಿದ್ದ. ಡಿ.25 ರಂದು ಈತನ ಪರಿಚಯದ ಸಚಿನ್ ಎಂಬಾತ ತಾನೊಮ್ಮೆ ಕುದುರೆ ಸವಾರಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದ. ಸಚಿನ್ ಬಳಿ ಕೂಡಾ ಕುದುರೆಯೊಂದಿದ್ದು, ಅವರು ಕೂಡಾ ಕುದುರೆ ಸವಾರಿಯ ಹವ್ಯಾಸವುಳ್ಳವರಾಗಿದ್ದು ಅದರಂತೆ ಸಚಿನ್ ಕುದುರೆ ಸವಾರಿ ಮಾಡಲು ಹೊರಟಿದ್ದು ಕುದುರೆ ಓಡುತ್ತಿದ್ದ ಸಂದರ್ಭ ಪೆದಮಲೆ ಬಳಿಯ ತಿರುವಿನಲ್ಲಿ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದರಿಂದ ಸಚಿನ್ ಕುದುರೆಯ ಮೇಲಿನಿಂದ ರಸ್ತೆಯ ಮೇಲೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾರೆ. ಬಸ್ ಢಿಕ್ಕಿಯಿಂದ ತಲೆಗೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಕುದುರೆ ಹೊರಳಾಡಿ ತನ್ನ ಪ್ರಾಣ ಕಳೆದು ಕೊಂಡಿದೆ. ಘಟನೆಯಲ್ಲಿ ಗಾಯಗೊಂಡು ಮೂಳೆ ಮುರಿತಕ್ಕೊಳಗಾಗಿರುವ ಸಚಿನ್ ಅವರನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version