ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಾರ್ಷಿಕ ಪ್ರತಿಭಾ ದಿನಾಚರಣೆ ಡಿ.24 ರಂದು ಜರುಗಿತು. ಈ ಸಂದರ್ಭದಲ್ಲಿ ಬಹುಮಾನ ವಿತರಣಾ ಸಮಾರಂಭ ಜರಗಿದ್ದು ಮುಖ್ಯ ಅಭ್ಯಾಗತರಾಗಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಧನ್ಯ ಕುಮಾರ್ ಆಗಮಿಸಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನವನ್ನು ಮಕ್ಕಳಿಗೆ ವಿತರಿಸಿ ಮಾತನಾಡುತ್ತಾ , ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹವಲ್ಲ. ವಿದ್ಯಾರ್ಥಿಗಳ ಪ್ರತಿಭೆ ಮತ್ತು ಆಂತರಿಕ ಸಾಮರ್ಥ್ಯದ ವಿಕಾಸ ಶಿಕ್ಷಣದ ಮೂಲ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ವಾರ್ಷಿಕೋತ್ಸವವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳ ವಿಕಾಸಕ್ಕೆ ಮತ್ತು ತರಬೇತಿಗೆ ವೇದಿಕೆಯ ಅವಕಾಶವನ್ನು ನೀಡುತ್ತದೆ. ಅಂತಹ ಅವಕಾಶವನ್ನು ಮಕ್ಕಳು ಪಡೆದುಕೊಂಡು ಬದುಕಿನಲ್ಲಿ ಎದುರಾಗುವ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ರೂಢಿಸಿಕೊಳ್ಳುವಂತಾಗಬೇಕು ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ ಶಾಲಾ ಧ್ವಜಾರೋಹಣವನ್ನು ನೆರವೇರಿಸಿ ವಾರ್ಷಿಕ ದಿನಾಚರಣೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ ಆಗಮಿಸಿದ್ದರು. ಸಭೆಯಲ್ಲಿ ವಿದ್ಯಾರ್ಥಿ ನಾಯಕ ಸಯ್ಯದ್ ಖಲಂದರ್ ತಾಹಿರ್ ಉಪಸ್ಥಿತರಿದ್ದರು.
ಶಿಕ್ಷಕರಾದ ಕೃಷ್ಣಾನಂದ , ಸುಮನ್ , ಜಗದೀಶ್ , ರಾಜಶ್ರೀ , ಶ್ರೀರಾಮ್ ಚಿತ್ರಾ ಮತ್ತು ಸುಂದರ್ ರವರು ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ , ರವಿಚಂದ್ರರು ವಂದಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ವಾರಿಜ ಎಸ್ ಗೌಡರವರು ನಿರೂಪಿಸಿದರು.
ಸಭೆಯ ನಂತರ ಶಾಲಾ ಮಕ್ಕಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.