ಮಲವಂತಿಗೆ: ಮಲವಂತಿಗೆ ಗ್ರಾಮದಲ್ಲಿ ಡಿ.24ರಂದು ರಾತ್ರಿ ಕೃಷಿ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಮಾಡಿರುವ ಘಟನೆ ನಡೆದಿದೆ.
ಮಲವಂತಿಗೆ ಗ್ರಾಮದ ಪಡುಮಣ್ಣು, ಕುದ್ಮುಲ್, ಪಲಂದ್ರೊಟ್ಟು,ಮಿತ್ತೊಟ್ಟು ಪರಿಸರದಲ್ಲಿ ನಾಲ್ಕೈದು ಕಾಡಾನೆಗಳು ಪ್ರವೇಶಿಸಿ ಕೃಷಿ ಹಾನಿ ಮಾಡಿದೆ. ಸ್ಥಳೀಯರ ಗಮನಕ್ಕೆ ಬಂದಿದ್ದು ಆನೆಗಳನ್ನು ಓಡಿಸಲು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಆನೆಗಳ ಗುಂಪು ಕಡಮಗುಂಡಿ ಪ್ರದೇಶಕ್ಕೆ ಹೋಗಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.
ಇದೇ ಪ್ರದೇಶದ ಸಮೀಪದ ತುಳುಪುಳೆ ಪರಿಸರದಲ್ಲಿ ಒಂಟಿ ಸಲಗ ಡಿ.24 ರಂದು ರಾತ್ರಿ ತೋಟಗಳಲ್ಲಿ ಕಾಣಿಸಿಕೊಂಡಿದೆ. ಆನೆಗಳು ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲವಂತಿಗೆ ಪರಿಸರದಲ್ಲಿ ಎಲೆ ಚುಕ್ಕಿ ರೋಗ ವಿಪರೀತವಾಗಿದ್ದು ಇದರ ಜತೆ ವನ್ಯಜೀವಿಗಳ ಕಾಟವು ಹೆಚ್ಚುತ್ತಿದ್ದು ಪ್ರದೇಶದ ಕೃಷಿಕರು ಹೈರಾಣಾಗುತ್ತಿದ್ದಾರೆ.