ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನ ಮೇಳ ಎಕ್ಸ್‌ಪೀರಿಯ- 2022 ಕಾರ್ಯಕ್ರಮವು ಡಿ. 22ರಂದು ವಿದ್ಯುಕ್ತವಾಗಿ ಆರಂಭಗೊಂಡಿತು.
ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮೇಳವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ನಂಬಿಕೆ ಮತ್ತು ವಿಶ್ವಾಸದಿಂದ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ. ನಾವು ನಮ್ಮ ಜೀವನದ ಉದ್ದೇಶಗಳನ್ನು ತಿಳಿದುಕೊಂಡು ಪೂರ್ಣರೀತಿಯ ಮಾಹಿತಿಯನ್ನು ಪಡೆದುಕೊಂಡು ಮುನ್ನಡೆದರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಇವರು ವಹಿಸಿ ಮಾತನಾಡಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣದಿಂದ ಪ್ರಖ್ಯಾತವಾಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ವಿಜ್ಞಾನಿಗಳು, ತಂತ್ರಜ್ಞರು ಆಗಬೇಕು. ಹೃದಯ ವೈಶಾಲ್ಯವಿರುವ ಸುಶಿಕ್ಷಿತ ಸಮಾಜವನ್ನು ನಿರ್ಮಿಸುವುದು ನಮ್ಮ ಶಿಕ್ಷಣ ಸಂಸ್ಥೆಗಳ ಧ್ಯೇಯವಾಗಿದೆ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ವಿಜ್ಞಾನ ರಸಪ್ರಶ್ನೆ, ಗಣಿತದ ಒಗಟು, ಹ್ಯಾಕಥಾನ್, ಸಿ.ಲ್ಯಾಗ್ವೆಜ್ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ, ಟ್ರೆಷರ್ ಹಂಟ್ ಮೊದಲಾದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ಸಂಜೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ ಎಂಬ ಹೊನಲು ಬೆಳಕಿನ `ದೃಶ್ಯರೂಪಕ’ವನ್ನು ಕೂಡ ಆಯೋಜಿಸಲಾಗಿದೆ.
ಕಾಲೇಜಿನ ಸಿವಿಲ್ ವಿಭಾಗದ ವಿಭಾಗ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಸಂಯೋಜಕರಾದ ರವೀಶ್ ಪಡುಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.