Site icon Suddi Belthangady

ಡಿ.22-23: ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಕ್ಸ್‌ಪೀರಿಯ 2022- ರಾಜ್ಯ ಮಟ್ಟದ ವಿಜ್ಞಾನ ಮೇಳ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನ ಮೇಳ ಎಕ್ಸ್‌ಪೀರಿಯ- 2022 ಡಿ. 22 ಹಾಗೂ ಡಿ.23 ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಸಿವಿಲ್ ವಿಭಾಗದ ವಿಭಾಗ ಮುಖ್ಯಸ್ಥರಾದ ರವೀಶ್ ಪಡುಮಲೆ ತಿಳಿಸಿದ್ದಾರೆ.

ಅವರು ಡಿ.20ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಡಿ.21ರಂದು ಬೆಳಗ್ಗೆ 10ಕ್ಕೆ ವಿಜ್ಞಾನ ಮೇಳವನ್ನು ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಇವರು ವಹಿಸಲಿದ್ದಾರೆ. ಮೇಳದಲ್ಲಿ ಆರು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ರಸಪ್ರಶ್ನೆ, ಗಣಿತದ ಒಗಟು, ಹ್ಯಾಕಥಾನ್, ಸಿ.ಲ್ಯಾಗ್ವೆಜ್ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ, ಟ್ರೆಷರ್ ಹಂಟ್ ಪ್ರಮುಖ ಸ್ಪರ್ಧೆಗಳಾಗಿದ್ದು, ಸ್ಪರ್ಧೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯೂ ನಡೆಯಲಿರುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 10 ಜಿಲ್ಲೆಗಳ 25 ಕಾಲೇಜುಗಳ ಸುಮಾರು 300ರಿಂದ 400 ವಿದ್ಯಾರ್ಥಿಗಳು ಭಾಗವಹಿಸುವು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ 150 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ. ದೂರದ ಊರಿನ ವಿದ್ಯಾರ್ಥಿಗಳಿಗಾಗಿ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ ಎಂಬ ಹೊನಲು ಬೆಳಕಿನ `ದೃಶ್ಯರೂಪಕ’ವನ್ನು ಕೂಡ ಆಯೋಜಿಸಲಾಗಿದೆ, ಕಾರ್ಯಕ್ರಮದ ಯಶಸ್ವಿಗೆ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ್ ಕುಮಾರ್ ಟಿ. ಸೇರಿದಂತೆ ಉಪನ್ಯಾಸಕ ವರ್ಗದವರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರತಾಪ್‌ಚಂದ್ರ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಚೇತನ್ ರಾವ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಡಾ. ರವೀಶ್ ಪಡುಮಲೆ 9008490579 ಪ್ರೊ. ಪ್ರತಾಪ್ ಚಂದ್ರ 9964025500, ಕಾಲೇಜು-0856-236621 ಸಂಪರ್ಕಿಸಬಹುದು.

Exit mobile version