ಶಿಬಾಜೆ: ನಾಲ್ಕು ಮಂದಿಯ ತಂಡವೊಂದು ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿದ ಹಾಗೂ ತೋಟದಲ್ಲಿದ್ದ ಇತರರು ಆತನನ್ನು ಉಪಚರಿಸಿ, ರಾತ್ರಿ ತೋಟದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಆತ ಮರುದಿನ ಅರೆಬೆತ್ತಲೆಯಾಗಿ ತೋಟದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಡಿ.18 ರಂದು ಶಿಬಾಜೆ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ನಾಲ್ಕು ಮಂದಿಯ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಎಂಬವರ ಮಾಲಿಕತ್ವದ ಸಾರ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಶ್ರೀಧರ(30ವ)ಎಂಬವರು ತೋಟದಲ್ಲಿ ಅಸಹಜವಾಗಿ ಸಾವನ್ನಪ್ಪಿದವರಾಗಿದ್ದಾರೆ.
ಇದೇ ಫಾರ್ಮ್‌ನಲ್ಲಿ ಮೇಲ್ವಿಚಾರಕರಾಗಿರುವ ಹರೀಶ್ ಮೋಗೇರ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಡಿ.17ರಂದು ಸಂಜೆ 5.30ಕ್ಕೆ ತೋಟದ ಆಫೀಸ್‌ನ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಕೇಳಿ ಹೊರಗೆ ಬಂದು ನೋಡಿದಾಗ ಶ್ರೀಧರ ಎಂಬವರು ರಸ್ತೆಯಲ್ಲಿ ಅಂಗಾತನೆ ಬಿದ್ದುಕೊಂಡುದ್ದು, ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ ಆನಂದ ಗೌಡ ಹಾಗೂ ಮಹೇಶ್ ಎಂಬವರು ಕೈಯಿಂದ ಹೊಡೆಯುತ್ತಿದ್ದರು. ಅಷ್ಟರಲ್ಲಿ ಅದೇ ತೋಟದಲ್ಲಿ ಕೆಲಸಕ್ಕೆ ಇದ್ದ ಟಿ.ಸಿ ಅಬ್ರಾಹಂ ಮತ್ತು ಪರಮೇಶ್ವರ ಗೌಡರವರು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಂತರ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಆತನು ರಾತ್ರಿ ಉಳಿದುಕೊಳ್ಳುವ ವಿಶ್ರಾಂತಿ ಕೊಠಡಿಗೆ ಕಳುಹಿಸಿಕೊಟ್ಟಿದ್ದೇವೆ. ಮರುದಿನ ಡಿ.18 ರಂದು ಬೆಳಿಗ್ಗೆ 6.30ಕ್ಕೆ ವಿಶ್ರಾಂತಿಯಲ್ಲಿದ್ದ ಶ್ರೀಧರನನ್ನು ಕೂಗಿ ಕರೆದಾಗ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಒಳ ಹೋಗಿ ನೋಡಿದಾಗ ಶ್ರೀಧರನು ವಿಶ್ರಾಂತಿ ಕೊಠಡಿಯಲ್ಲಿ ಇರಲಿಲ್ಲ. ಸುತ್ತಮುತ್ತಲು ಹುಡುಕಾಡಿದಾಗ ಕೊಠಡಿಯಿಂದ ಸುಮಾರು 250-300 ಮೀಟರ್ ದೂರದಲ್ಲಿ ಅಡಿಕೆ ತೋಟದಲ್ಲಿ ಬೆತ್ತಲೆಯಾಗಿ ಅಂಗಾತನೆ ಬಿದ್ದುಕೊಂಡಿರುವುದನ್ನು ಕಂಡು ಬಂದಿತ್ತು. ನಂತರ ತೋಟದ ಮಾಲಿಕರಿಗೆ ದೂವಾಣಿ ಮೂಲಕ ತಿಳಿಸಿ, ತೋಟವನ್ನು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿರುವುದು ಪತ್ತೆಯಾಗಿದೆ. ಆರೋಪಿಗಳು ವಿಶ್ರಾಂತಿ ಕೊಠಡಿಯ ಬಳಿ ಬಂದು ಶ್ರೀಧರನನ್ನು ಕೊಲೆ ಮಾಡಿ ತೋಟದ ಮದ್ಯೆ ಹಾಕಿ ಆತನ ಬಳಿ ಇದ್ದ ರೂ. ೯೫೦೦ನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಹರೀಶ್ ಮೋಗೇರ ದೂರಿನಲ್ಲಿ ಅಪಾದಿಸಿದ್ದಾರೆ. ಹರೀಶ್ ಮೋಗೇರ ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.