ಉಜಿರೆ :ವಿದ್ಯಾರ್ಥಿ ಜೀವನದ ಸವಿ ಅನುಭವಗಳನ್ನು ಹೊಂದುವುದರೊಂದಿಗೆ ನಾನೇನಾಗಬೇಕೆಂದು ನಿರ್ಧರಿಸಬೇಕು. ಇರುವ ಅವಕಾಶಗಳನ್ನು ಬಾಚಿಕೊಳ್ಳುವುದು ಸಹ ಅತಿ ಮುಖ್ಯ. ವೃತ್ತಿ ಜೀವನದಲ್ಲಿ ಈ ಮೂಲಕ ಅವಕಾಶ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಕೌಶಲ್ಯದೊಂದಿಗೆ ಮಹತ್ವಾಕಾಂಕ್ಷೆ ಅತಿ ಮುಖ್ಯ ಎಂದು ಮಂಗಳೂರು ಎನ್.ಸಿ.ಸಿ ವಿಭಾಗದ ಕಮಾಂಡಿಂಗ್ ಅಧಿಕಾರಿ ಕರ್ನಲ್ ನಿತಿನ್ ಆರ್ ಭಿಡೆ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಬಹುಮಾನ ವಿತರಣಾ ಸಮಾರಂಭದ ಅಭ್ಯಾಗತರಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಇವರು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ನಡೆಸುವ ಪರೀಕ್ಷೆ ಬರೆಯುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ವಿದ್ಯಾರ್ಥಿಗಳಿಗೆ ಉತ್ಸಾಹ, ತಾಳ್ಮೆ ಹಾಗೂ ಪರಿಶ್ರಮ ಮುಖ್ಯ. ಇದರೊಂದಿಗೆ ಚೈತನ್ಯ ಸ್ಪುರಿಸಬೇಕು ಎಂದು ಕರೆ ನೀಡಿದರು.
ಕನ್ನಡ ಭಾಷಾ ಉಪನ್ಯಾಸಕ ರಾಜೇಶ್ ಬಿ. ಅವರು ವಾರ್ಷಿಕ ವರದಿ ಮಂಡಿಸಿದರು. ಕಾಲೇಜಿನಲ್ಲಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಭಂಡಾರಿ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೋಮಲ್ ಗೌರವಿಸಿದರು. ವಿದ್ಯಾರ್ಥಿನಿ ತನ್ವಿ ಭಟ್ ಅಭ್ಯಾಗತರ ಪರಿಚಯ ಮಾಡಿದರು.
ಉಪನ್ಯಾಸಕ ದೀಕ್ಷಿತ್ ರೈ ನಿರೂಪಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಿವ್ಯಾ ಕುಮಾರಿ ಧನ್ಯವಾದ ಅರ್ಪಿಸಿದರು.