Site icon Suddi Belthangady

ವಸಂತ ಬಂಗೇರರ ವ್ಯಕ್ತಿತ್ವ ಚಿತ್ರಣ `ವಸಂತ ವಿನ್ಯಾಸ’ ಕೃತಿ ಡಿ.17: ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಬಿಡುಗಡೆ

ಬೆಳ್ತಂಗಡಿ: ಜೈ ಪ್ರಕಾಶನ ಸಂಸ್ಥೆ ಬೆಳ್ತಂಗಡಿ ಇದರ ವತಿಯಿಂದ ಹೊರತರಲಾದ ಮಾಜಿ ಶಾಸಕ ಕೆ. ವಸಂತ ಬಂಗೇರ ಇವರ ವ್ಯಕ್ತಿತ್ವ ಚಿತ್ರಣ ವಸಂತ ವಿನ್ಯಾಸ' ಪುಸ್ತಕದ ಅನಾವರಣ ಕಾರ್ಯಕ್ರಮವನ್ನು ಡಿ.17ರಂದು ಬೆಳ್ತಂಗಡಿ ಶ್ರೀ ಗುರುದೇವ ಪ.ಪೂ.ಕಾಲೇಜಿನ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನೆರವೇರಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ದೇವಿ ಪ್ರಸಾದ್ ಹೇಳಿದರು.

ಅವರು ಡಿ.14 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ವೈ.ಎಸ್.ವಿ. ದತ್ತ ಪುಸ್ತಕ ಪರಿಚಯವನ್ನು ಮಾಡಲಿದ್ದು, ಮುಖ್ಯ ಅಭ್ಯಾಗತರಾಗಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಚೇತನ್ ಶುಭಾಶಂಸನೆ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಸಿದ್ಧರಾಮಯ್ಯ ಅವರು ಸುಮಾರು ಬೆಳಗ್ಗೆ ೧೧.೩೦ಕ್ಕೆ ಬೆಳ್ತಂಗಡಿಗೆ ಬರುವ ನಿರೀಕ್ಷೆ ಇದೆ. ಇದೊಂದು ಸಾಹಿತ್ಯಿಕ ಕಾರ್ಯಕ್ರವಾಗಿದ್ದು, ಬಂಗೇರರ ಬದುಕಿನ ಬಗ್ಗೆ ಬರುವ ಪ್ರಥಮ ಪುಸ್ತಕವಾಗಿದೆ. ಸಿದ್ಧರಾಮಯ್ಯ ಅವರು ಬಂಗೇರರ ಆತ್ಮೀಯ ಸ್ನೇಹಿತರು ಅದಕ್ಕಾಗಿ ಇದೊಂದು ಪ್ರಮುಖ ಕಾರ್ಯಕ್ರಮ ಸಿದ್ಧರಾಮಯ್ಯ ಅವರುವಸಂತ ವಿನ್ಯಾಸ ಪುಸ್ತಕ’ ಬಿಡುಗಡೆಗೆಂದೇ ಬೆಳ್ತಂಗಡಿಗೆ ಬರುತ್ತಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಸಾಹಿತ್ಯಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಂದವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಗುರುದೇವ ಕಾಲೇಜಿನ ವಠಾರದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯ ಕಾರ್ಯಕ್ರಮವೇ ಪುಸ್ತಕ ಬಿಡುಗಡೆ:
ಸಿದ್ಧರಾಮಯ್ಯ ಅವರು ಬೆಳ್ತಂಗಡಿಗೆ ಬರುವ ಮುಖ್ಯ ಕಾರ್ಯಕ್ರಮವೇ ಪುಸ್ತಕ ಬಿಡುಗಡೆಯಾಗಿದೆ. ಇದು ಸಾಹಿತ್ಯಿಕ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಆದರೆ ಅವರು ಫೆಕ್ಸ್, ಬ್ಯಾನರ್, ಆಮಂತ್ರಣ ಪತ್ರಿಕೆಗಳಲ್ಲಿ ಪುಸ್ತಕ ಬಿಡುಗಡೆ ಅಲ್ಲಿ ಎಂದು ಹಾಕುತ್ತಿರುವುದು ಸರಿಯಲ್ಲ. ಈ ಕಾರ್ಯಕ್ರಮಕ್ಕೂ ಪ್ರಸನ್ನ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ. ಈ ಕಾರ್ಯಕ್ರಮವನ್ನು ಕೆಡಿಸುವ ಕಾರ್ಯ ಮಾಡುವುದು ಅವರಿಗೆ ಹಿತವಲ್ಲ, ಇದನ್ನು ನೋವಿನಿಂದ ಹೇಳುತ್ತಿದ್ದೇನೆ ಎಂದು ದೇವಿ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಸಂಚಾಲಕರುಗಳಾದ ಜನಾರ್ದನ ಬಂಗೇರ ಮೂಡಾಯಿಗುತ್ತು, ಚಿದಾನಂದ ಪೂಜಾರಿ, ಭಗೀರಥ ಜಿ, ವಸಂತ ಬಿ.ಕೆ ಉಪಸ್ಥಿತರಿದ್ದರು.

Exit mobile version