Site icon Suddi Belthangady

ಚಿಬಿದ್ರೆ, ತೋಟತ್ತಾಡಿ ಪ್ರದೇಶದಲ್ಲಿ ಕಾಡಾನೆ ಅಟ್ಟುವ ಕಾರ್ಯಾಚರಣೆ

ಚಿಬಿದ್ರೆ: ಚಿಬಿದ್ರೆ, ತೋಟತ್ತಾಡಿ ಗ್ರಾಮಗಳಲ್ಲಿ ನಿರಂತರ ದಾಳಿ ಇಡುತ್ತಿರುವ ಕಾಡಾನೆಗಳನ್ನು ಕಾಡಿನತ್ತ ಅಟ್ಟುವ ಕಾರ್ಯಾಚರಣೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಮುಂದಾಗಿದೆ.
ಕಳೆದ ಹಲವು ದಿನಗಳಿಂದ ಚಿಬಿದ್ರೆ ಅರಣ್ಯ ಉಪವಲಯ ವ್ಯಾಪ್ತಿಯ ತೋಟತ್ತಾಡಿ, ಬಾರೆ, ಕುಂಟಾಡಿ, ಅಗರಿ ಕುಕ್ಕಾಜೆ, ಮುದ್ದಿನಡ್ಕ ಮೊದಲಾದ ಪ್ರದೇಶಗಳಲ್ಲಿ ಒಂಟಿ ಸಲಗ ಸಹಿತ ಕಾಡಾನೆಗಳು ಕೃಷಿ ತೋಟಗಳಿಗೆ ಲಗ್ಗೆ ಇಟ್ಟು ಕೃಷಿನಾಶ ಮಾಡುತ್ತಿವೆ. ಕಾಡಾನೆಗಳ ಹಾವಳಿಯಿಂದ ಈ ಭಾಗದ ಕೃಷಿಕರ ಅಡಕೆ,ತೆಂಗು,ಬಾಳೆ ಮುಂತಾದ ಕೃಷಿ ನಾಶವಾಗುತ್ತಿದೆ.


ರಾತ್ರಿಯಾಗುತ್ತಿದ್ದಂತೆ ತೋಟಗಳಿಗೆ ಆಕ್ರಮಣ ನಡೆಸುವ ಕಾಡಾನೆಗಳು ಪರಿಸರದ ಜನತೆಗೆ ಹಾಗೂ ಅರಣ್ಯ ಇಲಾಖೆಗೆ ಸಡ್ಡು ಹೊಡೆಯುತ್ತಿವೆ. ಇಲ್ಲಿನ ಒಂದಲ್ಲ ಒಂದು ಪ್ರದೇಶದಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಇವುಗಳ ಉಪಟಳ ತಡೆಯಲು ಪರಿಸರದ ಜನ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇವುಗಳನ್ನು ಓಡಿಸಲು ಒಂದಿಷ್ಟು ಪಟಾಕಿಗಳನ್ನು ಇಲಾಖೆಯಿಂದ ನೀಡಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಲಭಿಸದ ಕಾರಣ ಪಟಾಕಿ ಸದ್ದಿಗೂ ಬೆದರದ ಕಾಡಾನೆಗಳು ದಾಳಿ ನಡೆಸುವುದು ನಿರಂತರವಾಗಿದೆ.

ಕಾರ್ಯಾಚರಣೆ ಆರಂಭ:ದ.ಕ ಡಿಎಫ್ ಒ ಡಾ.ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಆರ್ ಎಫ್ ಒ ತ್ಯಾಗರಾಜ್ ನಿರ್ದೇಶನದಂತೆ ಉಪವಲಯ ಅರಣ್ಯ ಅಧಿಕಾರಿಗಳ ತಂಡ ಭಾನುವಾರದಿಂದ ಕಾಡಾನೆಗಳನ್ನು ಅಟ್ಟುವ ಕಾರ್ಯಕ್ಕೆ ಮುಂದಾಗಿದೆ.

“ಚಿಬಿದ್ರೆ ಉಪವಲಯ ಪ್ರದೇಶದಲ್ಲಿ ಕಾಡಾನೆಗಳನ್ನು ಕಾಡಿನತ್ತ ಅಟ್ಟುವ ಕಾರ್ಯಾಚರಣೆಗೆ ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆ ಮುಂದುವರಿಯಲಿದೆ. ಹಗಲು ಹಾಗೂ ರಾತ್ರಿ ಬೇರೆ ಬೇರೆ ತಂಡಗಳು ಕಾರ್ಯನಿರ್ವಹಿಸಲಿವೆ. ಸರಕಾರದಿಂದ ಸೋಲಾರ್ ಬೇಲಿಗೆ ಸಿಗುವ ಸಹಾಯಧನ ಯೋಜನೆಗೆ ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ” – ತ್ಯಾಗರಾಜ್,ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹೇಳಿದ್ದಾರೆ.


ಧರ್ಮಸ್ಥಳ-ಮುಂಡಾಜೆ ಹಾಗೂ ಚಾರ್ಮಾಡಿ- ಕನಪಾಡಿ ರಕ್ಷಿತಾರಣ್ಯ ಪ್ರದೇಶಗಳು ಹತ್ತಿರವಿದ್ದು ಈ ಎರಡು ಅರಣ್ಯ ಪ್ರದೇಶಗಳಿಗೆ ತಂಡಗಳು ಭೇಟಿ ನೀಡುತ್ತಿದ್ದು, ಕಾಡಾನೆಗಳು ಬರುವ, ಅವು ಸಂಚರಿಸುವ ದಾರಿ,ಹೆಜ್ಜೆ ಗುರುತು ಮೊದಲಾದ ವಿಚಾರಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು,ರಾತ್ರಿ ಆನೆಗಳು ಮಾಮೂಲಾಗಿ ಬರುವ ತೋಟ ಹಾಗೂ ದಾಟಿ ಬರುವ ಸ್ಥಳಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಪಟಾಕಿ ಹಾಗೂ ಅಗತ್ಯ ಸಲಕರಣೆಗಳೊಂದಿಗೆ ಎರಡು ಪಾಳಿಗಳಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಉಪವಲಯ ಅರಣ್ಯ ಅಧಿಕಾರಿಗಳಾದ ಭವಾನಿ ಶಂಕರ್, ರವೀಂದ್ರ ಅಂಕಲಗಿ, ಯತೀಂದ್ರ, ಹರಿಪ್ರಸಾದ್, ಅರಣ್ಯ ರಕ್ಷಕರಾದ ಪಾಂಡುರಂಗ ಕಮತಿ, ಶರತ್, ಸಂತೋಷ್, ರವಿ,ಬಾಲಕೃಷ್ಣ ಇವರ ತಂಡ ಸ್ಥಳೀಯರ ಜತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎದುರಾದ ಒಂಟಿ ಸಲಗ: ತೋಟತ್ತಾಡಿಯ ಬಾರೆ ಪ್ರದೇಶದಲ್ಲಿ ಭಾನುವಾರ ರಾತ್ರಿ ಗಸ್ತು ನಿರತ ತಂಡಕ್ಕೆ ಒಂಟಿ ಸಲಗ ಎದುರಾಗಿದೆ. ತಂಡವು ಕಾರ್ಯಾಚರಣೆ ನಡೆಸುವ ವೇಳೆ 5ಮೀ. ದೂರದಲ್ಲಿ ಒಂಟಿ ಸಲಗ ಕಂಡಿದ್ದು ಪಟಾಕಿ ಸಿಡಿಸುವ ಮೂಲಕ ಕಾಡಿನತ್ತ ಅಟ್ಟಲಾಗಿದೆ. ಭಾರಿ ಗಾತ್ರದ ಈ ಒಂಟಿ ಸಲಗ ಯಾವುದೇ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸದೆ ಕಾಡಿನತ್ತ ತೆರಳಿರುವ ಕುರಿತು ತಂಡದ ಸದಸ್ಯರು ತಿಳಿಸಿದ್ದಾರೆ.

ಅಣಿಯೂರಿನಲ್ಲಿ ಒಂಟಿ ಸಲಗ: ಸೋಮವಾರ ಬೆಳಿಗ್ಗೆ 6:45ರ ಹೊತ್ತಿಗೆ ಇಲ್ಲಿಂದ ಸುಮಾರು 7-8 ಕಿಮೀ. ದೂರದ ನೆರಿಯ ಗ್ರಾಮದ ಅಣಿಯೂರು ಪೇಟೆ ಸಮೀಪದ ಜನನಿಬಿಡ ಪ್ರದೇಶದಲ್ಲಿ ಒಂಟಿ ಸಲಗ ಸೇತುವೆಯ ಕೆಳಭಾಗದಲ್ಲಿ ಸಂಚರಿಸುತ್ತಿರುವುದು ಸ್ಥಳೀಯರು ಕಂಡಿದ್ದು, ಒಂಟಿ ಸಲಗ ಸಂಚಾರದ ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ. ಅಣಿಯೂರಿನಲ್ಲಿರುವ ಕಾಡಿನ ಪ್ರದೇಶಕ್ಕೆ ಒಂಟಿ ಸಲಗ ತನ್ನ ಪ್ರಯಾಣವನ್ನು ಮುಂದುವರಿಸಿದ್ದು ಈ ಭಾಗದ ಕೃಷಿಕರಲ್ಲಿ ಭೀತಿ ಮೂಡಿಸಿದೆ. ಇದು ತೋಟತ್ತಾಡಿ ಪ್ರದೇಶದಿಂದ ಓಡಿಸಲಾದ ಒಂಟಿ ಸಲಗ ಇರಬಹುದೇ, ಅಥವಾ ಪ್ರತ್ಯೇಕ ಒಂಟಿ ಸಲಗವೇ ಎಂಬ ಅನುಮಾನ ವ್ಯಕ್ತವಾಗಿದೆ. ನೆರಿಯ, ತೋಟತ್ತಾಡಿ, ಮುಂಡಾಜೆ, ಕಡಿರುದ್ಯಾವರ,ಮಲವಂತಿಗೆ, ಚಾರ್ಮಾಡಿ ಮೊದಲಾದ ಪರಿಸರಗಳಲ್ಲಿ ಏಳೆಂಟು ಕಾಡಾನೆಗಳು ಇರುವ ಶಂಕೆ ಇದ್ದು ಇವು ಆಗಾಗ ಪರಿಸರಗಳನ್ನು ಬದಲಿಸುವುದು ಸಾಮಾನ್ಯವಾಗಿದೆ.


Exit mobile version