Site icon Suddi Belthangady

ಮುಂಡಾಜೆ: ಆನೆ ಹಾವಳಿ ತಡೆಗೆ ಆನೆ ಕಂದಕ ನಿರ್ಮಾಣ

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ ತೋಟತ್ತಾಡಿ,ಚಿಬಿದ್ರೆ ಚಾರ್ಮಾಡಿ,ನೆರಿಯ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳು ಹಲವಾರು ಎಕರೆ ಕೃಷಿ ಭೂಮಿಯನ್ನು ಹಾಳು ಗೆಡವಿದ್ದು ಇದು ನಿರಂತರವಾಗಿ ಮುಂದುವರಿದಿದೆ. ಈ ಭಾಗದಲ್ಲಿ ಒಂಟಿ ಸಲಗ ಸಹಿತ ಸುಮಾರು ಏಳೆಂಟು ಆನೆಗಳು ನಾನಾ ಗುಂಪುಗಳಲ್ಲಿ ದಾಳಿ ಇಟ್ಟು ಕೃಷಿ ಹಾನಿ ಮಾಡುತ್ತಿವೆ. ಮುಂಡಾಜೆ ಗ್ರಾಮದ ದುಂಬೆಟ್ಟು ಪ್ರದೇಶದಲ್ಲಿ ನಿರಂತರ 15 ದಿನ ಕಾಡಾನೆಗಳು ಕಳೆದ ಆರು ತಿಂಗಳ ಹಿಂದೆ ದಾಳಿ ನಡೆಸಿದ್ದವು. ಅರಣ್ಯ ಇಲಾಖೆ ನಾಗರಹೊಳೆಯಿಂದ ಆನೆಗಳನ್ನು ಕಾಡಿಗೆ ಆಟ್ಟುವ ನುರಿತ ಕಾವಾಡಿಗರನ್ನು ಕರೆಸಿ ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಂಡಿತ್ತು. ಆದರೆ ಇವರಿಗೆ ಹೆಚ್ಚಿನ ಸುಳಿವು ನೀಡದ ಕಾಡಾನೆಗಳು ಇವರ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದವು. ಬಳಿಕ ಇಲ್ಲಿನ ಗ್ರಾಮಗಳ ಅಲ್ಲಲ್ಲಿ ಕಾಡಾನೆಗಳು ನಿರಂತರ ಕೃಷಿ ಹಾನಿ ಉಂಟು ಮಾಡುವುದು ನಡೆದಿದೆ.

ಆನೆ ಕಂದಕ ನಿರ್ಮಾಣ:

ಸ್ಥಳೀಯ ಜನರು ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದಾರೆ. ಡಿಎಫ್ ಒ ಡಾ. ದಿನೇಶ್ ಕುಮಾರ್ ಹಾಗೂ ಅವರ ತಂಡ ಇಲ್ಲಿನ ಸ್ಥಳಗಳಿಗೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳೀಯ ಜನರ ಸಮಸ್ಯೆಯನ್ನು ಮನಗಂಡಿದ್ದರು. ಪ್ರಸ್ತುತ ಕಡಿರುದ್ಯಾವರ ಗ್ರಾಮದ ಕಂಚಲಗದ್ದೆ ಪ್ರದೇಶದಿಂದ ಮುಂಡಾಜೆ, ದುಂಬೆಟ್ಟು,ನಳಿಲು ಪ್ರದೇಶಗಳವರೆಗೆ ಸುಮಾರು ನಾಲ್ಕರಿಂದ ಐದು ಕಿಮೀ. ಆನೆ ಕಂದಕ ನಿರ್ಮಾಣ ಕೆಲಸ ನಡೆಯುತ್ತಿದೆ. ಕಾಮಗಾರಿಗೆ ಕಿಮೀ.ಒಂದರ ರೂ.98,000ದಷ್ಟು ವೆಚ್ಚ ತಗಲುತ್ತದೆ. ಆನೆ ಕಂದಕ ನಿರ್ಮಾಣದಿಂದ ಕಡಿರುದ್ಯಾವರ, ಮುಂಡಾಜೆ,ಚಿಬಿದ್ರೆ, ತೋಟತ್ತಾಡಿ ಪರಿಸರದಲ್ಲಿ ನಡೆಯುತ್ತಿರುವ ಆನೆಗಳ ದಾಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಕಳೆದ ವರ್ಷ ಚಾರ್ಮಾಡಿ ಗ್ರಾಮದ ಹೊಸಮಠ ಪ್ರದೇಶದಲ್ಲಿ ಸುಮಾರು 1.5 ಕಿಮೀ. ಆನೆ ಕಂದಕ ನಿರ್ಮಿಸಲಾಗಿತ್ತು.

ನಿರ್ವಹಣೆ ಅಗತ್ಯ:

ಇಲ್ಲಿನ ಗ್ರಾಮಗಳ ಹಲವು ಕಡೆ ಈಗಾಗಲೇ ರಚಿಸಲಾದ ಆನೆ ಕಂದಕಗಳಿವೆ. ಆದರೆ ಅವು ನಿರ್ವಹಣೆ ಕೊರತೆಯಿಂದ ಉಪಯೋಗ ಶೂನ್ಯವಾಗುತ್ತಿವೆ. ಆನೆ ಕಂದಕ ಪ್ರದೇಶಗಳಲ್ಲಿ ಮಣ್ಣು ಕುಸಿತ ಉಂಟಾಗಿ ಸಾಕಷ್ಟು ಗಿಡಗಂಟಿಗಳು ಬೆಳೆದಿದ್ದು ಕಾಡಾನೆಗಳು ಸುಲಭವಾಗಿ ಕಂದಕಗಳ ಮೂಲಕ ಪ್ರವೇಶಿಸುತ್ತಿವೆ. ಆನೆ ಕಂದಕಗಳ ನಿರ್ವಹಣೆಗೆ ಅರಣ್ಯ ಇಲಾಖೆ ಅನುದಾನ ನೀಡುವ ಯೋಜನೆ ಇರದ ಕಾರಣ ಇದರ ನಿರ್ವಹಣೆಯಾಗುತ್ತಿಲ್ಲ.

Exit mobile version