Site icon Suddi Belthangady

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಡಿ. 10 ರಂಗು ರಂಗಿತ ವಾಣಿ ಸಾಂಸ್ಕೃತಿಕ ಉತ್ಸವ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಾಣಿ ಪದವಿ ಪೂವ೯ ಕಾಲೇಜು, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ ಹಾಗೂ ವಾಣಿ ಸಾಂಸ್ಕೃತಿಕ ಹಬ್ಬ ಕ್ರಮವಾಗಿ ಡಿ.8, 9 ಹಾಗೂ1೦ರಂದು ವೈವಿಧ್ಯಮಯವಾಗಿ ಜರುಗಲಿದೆ ಎಂದು ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಹೇಳಿದ್ದಾರೆ.

ಅವರು ಡಿ.5ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ 1990 ರಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾದ್ಯಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವಾಣಿ ಆಂಗ್ಲ ಮಾದ್ಯಮ ಶಾಲೆಯನ್ನು ಹುಟ್ಟು ಹಾಕಿತು. ಆರಂಭದಲ್ಲಿ ಎಲ್.ಕೆ.ಜಿ ಯಿಂದ ಎಸ್ಸೆಸ್ಸೆಲ್ಸಿ ವರೆಗೆ ಶಿಕ್ಷಣ ನಡೆಸುತ್ತಿದ್ದ ಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣ ನೀಡುವ ದೃಷ್ಟಿಯಿಂದ ಸುಳ್ಯದ ದಿ. ಕುರುಂಜಿ ವೆಂಕಟರಮಣ ಗೌಡರ ಸಹಕಾರದೊಂದಿಗೆ 2004ರಲ್ಲಿ ವಾಣಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭ ಮಾಡಿತು. ನಿರಂತರವಾಗಿ ಉತ್ತಮ ಶಿಕ್ಷಣ ನೀಡುತ್ತಾ ತಾಲೂಕು ದಶಕಗಳಲ್ಲಿ ವಾಣಿ ಶಿಕ್ಷಣ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಪಡೆಯಿತು ಎಂದು ಹೇಳಿದರು.

ವಾಣಿ ಪಠ್ಯ ವಿಚಾರಗಳೊಂದಿಗೆ ಪತ್ಯೇತರ ಚಟುವಟಿಕೆಗಳು ಆರಂಭ ಕಾಲದಿಂದಲೇ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ಹೆಮ್ಮೆ ವಾಣಿ ಶಿಕ್ಷಣ ಸಂಸ್ಥೆಗೆ ಇದೆ. ಇಂದು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ 2 ಸಾವಿರ ವಿದ್ಯಾರ್ಥಿಗಳು ಜ್ಞಾನಾರ್ಜನೆ. ಗೈಯುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾ ಮಾರಿಯಿಂದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಡಗಿಸಿಕೊಳ್ಳಲು ಸಾದ್ಯವಾಗಿಲ್ಲ ಹಾಗೂ ಇಲಾಖೆ ಯಾವುದಕ್ಕು ಅನುಮತಿಯನ್ನು ನೀಡಿಲ್ಲ ಆದರೆ ಈ ವರ್ಷ ನಮ್ಮ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಈ ದೃಷ್ಟಿಯಿಂದ ಶಾಲಾ ಕಾಲೇಜಿನ ವಾರ್ಷಿಕ ಹಬ್ಬಗಳನ್ನು ನಡೆಸುವುದರ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಒಂದು ದಿನದ ವಾಣಿ ಸಾಂಸ್ಕೃತಿಕ ಉತ್ಸವವನ್ನು ನಡೆಸಿ ಬೆಳ್ತಂಗಡಿಯ ಕಲಾಭಿಮಾನಿಗಳಿಗೆ ವಿವಿಧ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶನ ಮಾಡಬೇಕು ಎನ್ನುವ ದೃಷ್ಟಿಯಿಂದ ವಾಣಿ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಡಿ.8 ರಂದು ವಾಣಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ, ಡಿ.9ರಂದು ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ ನಡೆಯಲಿದೆ ಎಂದು ವಿವರಿಸಿದರು.

ಡಿ.10 ರಂದು ನಡೆಯಲಿರುವ ವಾಣಿ ಸಾಂಸ್ಕೃತಿಕ ಹಬ್ಬವನ್ನು ಶಾಸಕರಾದ ಹರೀಶ್ ಪೂಂಜ ಅವರು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ವಾಣಿ ಶಿಕ್ಷಣಾ ಸಂಸ್ಥೆಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಶಿಧರ ಶೆಟ್ಟಿ ಉದ್ಯಮಿಗಳು ಬರೋಡ, ಪುತ್ತೂರು ಗೌಡ ಸಂಘದ ಗೌರವಾಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ ಕ್ಷೇತ್ರ , ಶಿಕ್ಷಣಾಧಿಕಾರಿ ಎಚ್. ಎಸ್ ವಿರೂಪಾಕ್ಷಪ್ಪ , ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಎಚ್ . ಪದ್ಮ ಗೌಡ ಭಾಗವಹಿಸಲಿದ್ದಾರೆ. ಬೆಂಗಳೂರಿನ ನಾರಾಯಣ ಗೌಡ ಬೇಗೂರು, ಪಟ್ಟಣಾ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ, ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್‌ ಕಾರಿಂಜ, ಮುಂಬಾಯಿಯ ಉದ್ಯಮಿಗಳಾದ ಎ. ಎಂ ಪ್ರಾನ್ಸಿಸ್ ಮಿಯ್ಯಾರು ಶ್ರೀರಾಮ ವ್ಯಾಲ್ಯೂ ಸರ್ವಿಸಸ್, ಸೋಲಾರ್ ಟೆಕ್ನಾಲಜಿ ಸೊಲ್ಯೂಸನ್‌ನ ನಿರ್ದೇಶಕರಾದ ನಿತ್ಯಾನಂದ ಬಿ ಹೈದರಾಬಾದಿನ ನೋವಾಟಿನ್ ಕಂಪೆನಿಯ ಕುಮಾರಿ ಚಿನ್ಮಯಿ ವಿ ಭಟ್ ಪ್ರಗತಿ ಪರ ಕೃಷಿಕರು ನ್ಯಾಯವಾದಿಗಳು ಆದ ಸತೀಶ್ ರೈ ಬಾರಡ್ಕ ಬಳಂಜ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುರೇಶ್‌ ಶೆಟ್ಟಿ ಕುರಲ್ಯ ಇವರು ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.

ರಸನುಡಿ ಕಾಯ೯ಕ್ರಮ:
ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಖ್ಯಾತ ವಾಗ್ಮಿ ಶ್ರೀಮತಿ ಸುಧಾ ಬರಗೂರು ಇವರಿಂದ ‘ರಸನುಡಿ’ ಕಾರ್ಯಕ್ರಮ ನಡೆಯಲಿದೆ. ಈ ಸಂಧರ್ಭದಲ್ಲಿ ಈ ವರ್ಷದ ರಾಜ್ಯೋತ್ಸವದ ಪ್ರಶಸ್ತಿಯನ್ನು ಪಡೆದ ಖ್ಯಾತ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಹಾಗೂ ಬೆಳ್ತಂಗಡಿ ರೋಟರಿ ಕಾರ್ಯದರ್ಶಿಗಳಾದ ಶ್ರೀಮತಿ ರಕ್ಷಾ ರಾಗೇಶ್ ಅವರು ಮುಖ್ಯ ಅಭಾಗತರಾಗಿ ಭಾಗವಹಿಸಲಿದ್ದಾರೆ .

ನೃತ್ಯ ವೈಭವ:
ಅಪರಾಹ್ನ 2.30 ರಿಂದ 4.30ರ ವರೆಗೆ ನೃತ್ಯ ವೈಭವ ಕಾರ್ಯಕ್ರಮ ವಿಧೂಷಿ ಶ್ರೀಮತಿ ವಿದ್ಯಾ ಮನೋಜ್ ಶಿಷ್ಯರಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷನೃತ್ಯ ಹಾಗೂ ಪ್ಯೂಷನ್ ಡ್ಯಾನ್ಸ್ ನಡೆಯಲಿದೆ. ಸಂಜೆ 5.30 ರಿಂದ 8.30 ರ ವರೆಗೆ ರಾಜ್ಯದಲ್ಲಿಯೇ ಮಾನ್ಯತೆಯನ್ನು ಪಡೆದ ಸಿಟಿ ಗಮ್ಸ್ ಡ್ಯಾನ್ಸ್ ಕ್ರಿವ್ (ಕುಡ್ಲ ಕ್ರೀನ್ಸ್) ಮಂಗಳೂರು ತಂಡದಿಂದ ಡ್ಯಾನ್ಸ್ ಶೋ ಕಾರ್ಯಕ್ರಮ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾವ೯ಜನಿಕರನ್ನು , ವಿದ್ಯಾಭಿಮಾನಗಳನ್ನು ವಾಣಿ ಶಿಕ್ಷಣ ಸಂಸ್ಥೆಗಳ ಪರವಾಗಿ ಸ್ವಾಗತಿಸುತ್ತಿದ್ದೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಗೌರವಾಧ್ಯಕ್ಷ ಪದ್ಮ ಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಉಪ ಪ್ರಾಂಶುಪಾಲ ವಿಷ್ಣುಪ್ರಕಾಶ್‌ ಉಪಸ್ಥಿತರಿದ್ದರು.

Exit mobile version